ಬಂಟ್ವಾಳ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಿಬ್ಬಂದಿ ಯಾದವ ಕೆ ಅವರಿಗೆ ಬೀಳ್ಕೊಡುಗೆ ಹಾಗೂ ಗೌರವಾರ್ಪಣೆ
ಬಂಟ್ವಾಳ, ಅಕ್ಟೋಬರ್ 31, 2026 (ಕರಾವಳಿ ಟೈಮ್ಸ್) : ಸರಕಾರಿ ಸೇವೆಯನ್ನು ಸಾರ್ವಜನಿಕ ಸೇವೆ ಎಂದು ಭಾವಿಸಿ ಯಾವುದೇ ವಂಚನೆ ಇಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರನ್ನು ವ್ಯವಸ್ಥೆ ಯಾವತ್ತೂ ಗೌರವಿಸುತ್ತದೆ ಎಂಬುದಕ್ಕೆ ಬಂಟ್ವಾಳ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಿಬ್ಬಂದಿ ಯಾದವ ಕೆ ಅವರು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರನಾಥ ಸಾಲ್ಯಾನ್ ಹೇಳಿದರು.
ಕಚೇರಿಯಲ್ಲಿ ಸರಕಾರಿ ಸೇವೆಯಲ್ಲಿದ್ದು, ವಯೋ ನಿವೃತ್ತಿ ಹೊಂದುತ್ತಿರುವ ಸಿಬ್ಬಂದಿ ಯಾದವ ಕೆ ಅವರಿಗೆ ಕಚೇರಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಬಂಟ್ವಾಳ ತಾಲೂಕು ಪಿಡಬ್ಲ್ಯುಡಿ ಗುತ್ತಿಗೆದಾರರ ಸಂಘದ ವತಿಯಿಂದ ಅ 31 ರಂದು ಆಯೋಜಿಸಲಾದ ಬೀಳ್ಕೊಡುಗೆ ಹಾಗೂ ಗೌರವಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾದವ ಅವರು ಕಚೇರಿಯಲ್ಲಿ ಎಲ್ಲರಿಗೂ ಸದಾ ಗೌರವ ಕೊಟ್ಟು ಗೌರವ ಪಡೆದುಕೊಂಡವರು. ಎಲ್ಲರೊಂದಿಗೂ ವಿನಯ, ತಾಳ್ಮೆ ಹಾಗೂ ಸೌಮ್ಯ ಸ್ವಭಾವದೊಂದಿಗೆ ಬೆರೆತವರು. ತಮ್ಮ ಸೇವೆಯಲ್ಲಿ ಯಾವುದೇ ಕಣ್ಕಟ್ಟು ಇಲ್ಲದೆ ನಿಷ್ಠೆ ಹಾಗೂ ನಿಯತ್ತಿನಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದವರು. ಈ ಕಾರಣಕ್ಕಾಗಿ ಅವರ ಬೀಳ್ಕೊಡುಗೆ ಎನ್ನುವಾಗ ಎಲ್ಲರಿಗೂ ಬೇಸರ ತರಿಸಿದೆ ಎಂದರು.
ನೀವು ಸೇವೆಯಿಂದ ನಿವೃತ್ತಿ ಹೊಂದಿರಬಹುದು. ಆದರೆ ನಮ್ಮ ಜೊತೆಗೆ ಇಟ್ಟುಕೊಂಡಿದ್ದ ಒಡನಾಟದಿಂದ ಯಾವತ್ತೂ ನಿವೃತ್ತಿ ಹೊಂದುವುದಿಲ್ಲ. ನಿಮ್ಮ ನಿವೃತ್ತಿ ಜೀವನದಲ್ಲೂ ನಿಮ್ಮ ಎಲ್ಲಾ ಕಷ್ಟ-ಸುಖಗಳಲ್ಲಿಯೂ ನಿಮ್ಮ ಜೊತೆ ನಮ್ಮ ಇಲಾಖಾ ಕುಟುಂಬ ಸದಾ ಇರಲಿದೆ. ವೈಯುಕ್ತಿಕವಾಗಿಯೂ ನಾವೆಲ್ಲರೂ ನಿಮ್ಮ ಜೊತೆಗಿರುತ್ತೇವೆ ಎಂದು ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಬಂಟ್ವಾಳ ಇದರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿ ಎಸ್ ನಟೇಶ್ ಕುಮಾರ್, ಮಂಗಳೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಸಹಾಯಕ ಇಂಜಿನಿಯರ್ ಸಚಿನ್, ಮಂಗಳೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಸಹಾಯಕ ಇಂಜಿನಿಯರ್ ಕಚೇರಿಯ ಲೆಕ್ಕ ಅಧೀಕ್ಷಕ ಅನ್ಸಾರ್, ಬಂಟ್ವಾಳ ತಾಲೂಕು ಪಿಡಬ್ಲ್ಯುಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಶುಭ ಹಾರೈಸಿದರು. ಗುತ್ತಿಗೆದಾರರಾದ ಜಲೀಲ್ ಬ್ರೈಟ್ ಹಾಗೂ ಬಾಲಕೃಷ್ಣ ಸೆರ್ಕಳ ಅವರು ಅನಿಸಿಕೆ ವ್ಯಕ್ತಪಡಿಸಿದರು.
ನಿವೃತ್ತ ಇಂಜಿನಿಯರ್ ಪದ್ಮರಾಜ್ ಗೌಡ, ಇಂಜಿನಿಯರ್ ಗಳಾದ ಅಜಿತ್, ಜಗದೀಶ್, ರವಿಚಂದ್ರ, ನಾಗೇಶ್, ನಾಸಿರ್, ಸಹಾಯಕ ಇಂಜಿನಿಯರ್ ಕುಶ ಕುಮಾರ್, ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾ ಪಿ ಎಸ್ ಮುಹಮ್ಮದ್ ಇಕ್ಬಾಲ್ ಜೆಟಿಟಿ, ರಂಜನ್ ಶೆಟ್ಟಿ, ಕಾರ್ಯದರ್ಶಿ ಕರುಣಾಕರ ಪಿ, ಹಿರಿಯ ಗುತ್ತಿಗೆದಾರರಾದ ಅಬ್ದುಲ್ ಖಾದರ್, ಶಶಿಧರ ಪುಣಚ, ನಾರಾಯಣ, ಅಬ್ದುಲ್ ಜಲೀಲ್, ನಾರಾಯಣ ಭಟ್, ಪದ್ಮನಾಭ ಎ, ಯಶೋಧರ, ರಿಯಾಝ್ ನಾವೂರು, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಸದಸ್ಯರುಗಳು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು. ಸೌಮ್ಯ ಸ್ವಾಗತಿಸಿ, ಮಮತಾ ವಂದಿಸಿದರು.
















0 comments:
Post a Comment