ಪುತ್ತೂರು, ಅಕ್ಟೋಬರ್ 04, 2026 (ಕರಾವಳಿ ಟೈಮ್ಸ್) : ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ, ನೀವು ಶಿಕ್ಷಣ ಪಡೆದು ನಾಳೆಯ ಬದುಕಿಗೆ ಸುಂದರ ಹೆಜ್ಜೆ ಇಡುವ ಸಮಯ, ನೀವು ಏನಾಗಬೇಕೆಂದು ಬಯಸಿದ್ದೀರೋ ಅದನ್ನು ಸಾಧಿಸಿ ಸಫಲರಾಗುವ ಛಲ ನಿಮ್ಮಲ್ಲಿರಬೇಕು. ಶಿಕ್ಷಣವಂತರಾಗಿ ಸಾಧನೆ ಮಾಡುವ ಮೂಲಕ ಕಲಿತ ಸಂಸ್ಥೆಗೆ, ಊರಿಗೆ, ದೇಶಕ್ಕೆ ಕೀರ್ತಿ ತರುವ ಕೆಲಸವನ್ನು ಪ್ರತೀಯೊಬ್ಬರೂ ಮಾಡಬೇಕು, ನಿಮ್ಮ ಶಿಕ್ಷಣಕ್ಕೆ ಏನು ನೆರವು ಬೇಕೋ ಅದನ್ನು ನಾನು ಮಾಡುವೆ ಎಂದು ಶಾಸಕ ಅಶೋಕ್ ರೈ ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.
ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಅ 3 ರಂದು ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿದ ಶಾಸಕರು ವಿದ್ಯಾರ್ಥಿಗಳ ಜೊತೆ ಸುಮಾರು 2 ಗಂಟೆಗಳ ಕಾಲ ವಿವಿಧ ವಿಚಾರಗಳಿಗೆ ಸಂಬಂಧಿಸಿ ಚರ್ಚೆ ನಡೆಸಿದರು.
ವಿದ್ಯಾರ್ಥಿ ಜೀವನ ಎಂಬುದು ನಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ. ನೀವು ಮುಂದೆ ಏನು ಆಗಬೇಕೆಂದು ಬಯಸಿದ್ದೀರೋ ಅದನ್ನು ಈಡೇರಿಸುವ ಸಮಯ ವಿದ್ಯಾರ್ಥಿ ಜೀವನ. ಎಲ್ಲಿ, ಏನೆಲ್ಲಾ ಕಲಿಯಲು ಅವಕಾಶವಿದೆಯೋ ಅದೆಲ್ಲವನ್ನೂ ಕಲಿತು ಜ್ಞಾನವನ್ನು ವೃದ್ದಿಸಿಕೊಳ್ಳಬೇಕು. ಕಲಿತ ವಿದ್ಯೆ ಎಂದೂ ವ್ಯರ್ಥವಾಗುವುದೇ ಇಲ್ಲ. ಕಲಿಕೆಯ ಜೊತೆ ಇತರೆ ಶೈಕ್ಷಣಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವು ಮ್ತತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಜೀವನಕ್ಕೆ ಮುನ್ನುಡಿ ಬರೆಯವ ಛಲ ಎಲ್ಲರಲ್ಲೂ ಇರಬೇಕು ಎಂದು ಶಾಸಕರು ಹೇಳಿದರು.
ವಿದ್ಯಾರ್ಥಿಗಳನ್ನು ರಾಜಕೀಯ ಶಕ್ತಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಇಂದಿನ ಕಾಲಘಟ್ಟದಲ್ಲಿ ನೀವು ಅತ್ಯಂತ ಎಚ್ಚರದಿಂದ ಇರಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿಗಳಾಗಿಯೇ ಇರಬೇಕು ವಿನಾ ನಿಮ್ಮ ಕಲಿಕೆಯ ಕಾಲದಲ್ಲಿ ರಾಜಕೀಯದವರ ಬಲಿಪಶುಗಳಾಗಬೇಡಿ. ನಿಮ್ಮ ತಂದೆ ತಾಯಿ ಕಷ್ಟದಿಂದ ಯಾವುದೋ ಉದ್ದೇಶ ಇಟ್ಟುಕೊಂಡು ನಿಮಗೆ ಶಿಕ್ಷಣ ನೀಡುತ್ತಿರಬಹುದು ಅವರ ನಿರೀಕ್ಷೆಯನ್ನು ಎಂದೂ ಮಣ್ಣು ಪಾಲುಮಾಡಬೇಡಿ ಎಂದು ಶಾಸಕರು ಸಲಹೆ ನೀಡಿದರು.
ಪ್ರತೀ ಬಾರಿ ಶೈಕ್ಷಣಿಕ ವರ್ಷದ ಪಲಿತಾಂಶ ಬಂದಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರೇ ಪ್ರಥಮ ಸ್ಥಾನದಲ್ಲಿರುತ್ತಾರೆ, ರ್ಯಾಂಕ್ ಹೊಡೆಯುವುದರಲ್ಲೂ ನಾವೇ ಪ್ರಥಮದಲ್ಲಿರುತ್ತೇವೆ. ಆದರೆ ಸರಕಾರಿ ಕೆಲಸ ಪಡೆಯುವುದರಲ್ಲಿ ನಾವು ಕೊನೆಯ ಸ್ಥಾನದಲ್ಲಿರುತ್ತೇವೆ. ನಾವು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸದೇ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಪ್ರತೀಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಸೋಲುತ್ತದೋ, ಗೆಲ್ಲುತ್ತದೋ ಎಂಬುದರ ಬಗ್ಗೆ ನೀವು ಚಿಂತೆ ಮಾಡಬೇಡಿ. ಸೋಲೇ ಜೀವನದ ಗೆಲುವಿನ ಹಾದಿ ಎಂಬುದನ್ನೂ ಯಾರೂ ಮರೆಯಬಾರದು ಎಂದು ಅಶೋಕ್ ರೈ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಇದೇ ವೇಳೆ ಬೊಳುವಾರಿನಲ್ಲಿರುವ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಕೆಲವೊಂದು ಸಮಸ್ಯೆಗಳನ್ನು, ಬೇಡಿಕೆಗಳನ್ನು ವಿದ್ಯಾರ್ಥಿಗಳು ಶಾಸಕರ ಮುಂದಿಟ್ಟರು. ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿರುವ ಕಾರಣ ಕಾಲೇಜಿನ ಆವರಣದಲ್ಲೇ ಕ್ಯಾಂಟೀನ್ ವ್ಯವಸ್ಥೆ ಮಾಡಬೇಕು ಮತ್ತು ಈ ಕ್ಯಾಂಟೀನಿನಲ್ಲಿ ಕೈಗೆಟಕುವ ಧರದಲ್ಲಿ ವಿದ್ಯಾರ್ಥಿಗಳಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಬೇಕು ಎಂಬ ವಿದ್ಯಾರ್ಥಿಗಳ ಬೇಡಿಕೆಗೆ ಶಾಸಕರು ಒಪ್ಪಿಗೆ ಸೂಚಿಸಿದ್ದಾರೆ.
ಕಾಲೇಜಿನಲ್ಲಿ ಕಂಪ್ಯೂಟರ್ ಸಂಖ್ಯೆ ಕೇವಲ ನಾಲ್ಕು ಇದೆ. ಅದನ್ನು ಹತ್ತಕ್ಕೇರಿಸಿ. ಕಾಲೇಜಿಗೆ ಬರಲು ಸಿಟಿ ಬಸ್ ವ್ಯವಸ್ಥೆ ಮಾಡಿ, ವಿವಿಧ ಗ್ರಾಮಾಂತರ ಭಾಗದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಇದೆ ಎಂದೆಲ್ಲಾ ವಿದ್ಯಾರ್ಥಿಗಳು ಶಾಸಕರ ಗಮನ ಸೆಳೆದರು. ವಿದ್ಯಾರ್ಥಿಗಳ ಮನವಿಗೆ ಶಾಸಕರು ಸ್ಪಂದಿಸಿದರು.
ವಾಸದ ಮನೆ ಇಲ್ಲ, ಮನೆ ಕಟ್ಟಲು ನಿವೇಶನ ಕೊಡಿ, ಮನೆ ಕಾಮಗಾರಿ ಆರ್ಧದಲ್ಲಿದೆ, ಮನೆಯ ಅಕ್ರಮ ಸಕ್ರಮ ಮಾಡಿಕೊಡಿ, ರಸ್ತೆಗೆ ಕಾಂಕ್ರೀಟ್ ಮಾಡಿ, ಸ್ಪರ್ಧಾತ್ಮ ಪರೀಕ್ಷೆ ಬರೆಯುವಲ್ಲಿ ಸಹಕಾರ ಬೇಕು ಮೊದಲಾದ ಬೇಡಿಕೆಗಳನ್ನು ವಿದ್ಯಾರ್ಥಿಗಳು ಶಾಸಕರ ಮುಂದಿಟ್ಟರು.
ವಿದ್ಯಾರ್ಥಿಗಳ ಬೇಡಿಕೆಗಳನ್ನು ಸ್ಥಳದಲ್ಲೇ ಮಂಜೂರು ಮಾಡಿದ ಶಾಸಕರು ರಸ್ತೆ ನಿಮಾಣಕ್ಕೆ ಒಟ್ಟು 50 ಲಕ್ಷದ ಅನುದಾನ ಮಂಜೂರು ಮಾಡಿದರು. ಅಕ್ರಮ ಸಕ್ರಮ ಅರ್ಜಿಯ ಮಾಹಿತಿ ನೀಡುವಂತೆ ಸೂಚಿಸಿದರು. ಮನೆ ಇಲ್ಲದವರಿಗೆ ನಿವೇಶನ ಕೊಟ್ಟೇ ಕೊಡ್ತೇನೆ. ಮನೆ ಕಟ್ಟಲು ಎರಡು ಲಕ್ಷ ರೂಪಾಯಿ ಕೊಡಿಸುವುದಾಗಿಯೂ ಶಾಸಕರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಶಾಸಕರ ಸಂವಾದ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಮುಕ್ತವಾಗಿ ಮಾತನಾಡಲು ಅವಕಾಶ ಮಾಡಿಕೊಟ್ಟ ಶಾಸಕರ ನಡೆಗೆ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದರು.
ನನ್ನ ವಿಧಾನ ಸಭಾ ಕ್ಷೇತ್ರದ ಕಾಲೇಜು ವಿದ್ಯಾರ್ಥಿಗಳ ಜೊತೆ ಒಂದು ದಿನ ಬೆರೆತು ಅವರ ಬೇಡಿಕೆ, ಸಮಸ್ಯೆಗಳನ್ನು ಆಲಿಸುವ ಒಂದು ಹೊಸ ಪ್ರಯೋಗವನ್ನು ಆರಂಭಿಸಿದ್ದೇನೆ. ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಜೊತೆ ಈ ಸಂವಾದ ನಡೆಯಲಿದೆ. ಪ್ರಾರಂಭದಲ್ಲಿ ಪುತ್ತೂರಿನ ಪ್ರಥಮ ದರ್ಜೆ ಸರಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿಗಳನ್ನು ಬೇಟಿಯಾಗಿದ್ದೇನೆ. ಅವರ ಜೊತೆ ಮುಕ್ತವಾಗಿ ಮಾತನಾಡಿದ್ದೇನೆ. ಸಂಪನ್ಮೂಲ ವ್ಯಕ್ತಿಗಳಿಂದ ಅವರಿಗೆ ತರಬೇತಿಯನ್ನು ನೀಡಿದ್ದೇನೆ. ಯುವ ವಿದ್ಯಾರ್ಥಿ ಸಮೂಹದ ಶಿಕ್ಷಣ ಅಥವಾ ಕಲಿಕೆಗೆ ಯಾವುದೇ ತೊಂದರೆಗಳಿದ್ದಲ್ಲಿ ಅದನ್ನು ಪರಿಹರಿಸಿ ಮತ್ತು ಅವರ ಸಮಸ್ಯೆಗಳನ್ನು ಆಲಿಸುವ ಉದ್ದೇಶ ಇದರ ಹಿಂದಿದೆ. ಬಹುತೇಕ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ ಎಂದು ಇದೇ ವೇಳೆ ಶಾಸಕ ಅಶೋಕ್ ರೈ ಹೇಳಿದರು.
ಸಂವಾದದ ಬಳಿಕ ಶಾಸಕರು ವಿದ್ಯಾರ್ಥಿಗಳ ಜೊತೆ ಸಹಭೋಜನ ನಡೆಸಿದರು. ಪ್ರತಿ ವಿದ್ಯಾರ್ಥಿಗಳಿಗೂ ಶಾಸಕರ ಉಡುಗೊರೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ರೈ ಚಾರಿಟೇಬಲ್ ಟ್ರಸ್ಟ್ ಕಾಯಾಧ್ಯಕ್ಷ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಸತೀಶ್ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಎಪಿಎಂಸಿ ಸಭಾಂಗಣಕ್ಕೆ ಬರಲು ಕಾಲೇಜಿನಿಂದ ಮಿನಿ ಬಸ್ ವ್ಯವಸ್ಥೆ ಮಾಡಲಾಗಿತ್ತು.




















0 comments:
Post a Comment