ರೈಲ್ವೆ ಮೈಸೂರು ವಿಭಾಗದಾದ್ಯಂತ ‘ರೈಲ್ ಜನ ಸಂವಾದ’ ಕಾರ್ಯಕ್ರಮ ಆಯೋಜನೆ, ಪ್ರಯಾಣಿಕರ ಸೌಲಭ್ಯ ಮತ್ತು ಸ್ವಚ್ಛತೆ ಸುಧಾರಣೆಗೆ ಒತ್ತು - Karavali Times ರೈಲ್ವೆ ಮೈಸೂರು ವಿಭಾಗದಾದ್ಯಂತ ‘ರೈಲ್ ಜನ ಸಂವಾದ’ ಕಾರ್ಯಕ್ರಮ ಆಯೋಜನೆ, ಪ್ರಯಾಣಿಕರ ಸೌಲಭ್ಯ ಮತ್ತು ಸ್ವಚ್ಛತೆ ಸುಧಾರಣೆಗೆ ಒತ್ತು - Karavali Times

728x90

22 October 2026

ರೈಲ್ವೆ ಮೈಸೂರು ವಿಭಾಗದಾದ್ಯಂತ ‘ರೈಲ್ ಜನ ಸಂವಾದ’ ಕಾರ್ಯಕ್ರಮ ಆಯೋಜನೆ, ಪ್ರಯಾಣಿಕರ ಸೌಲಭ್ಯ ಮತ್ತು ಸ್ವಚ್ಛತೆ ಸುಧಾರಣೆಗೆ ಒತ್ತು

ಮೈಸೂರು, ಅಕ್ಟೋಬರ್ 22, 2026 (ಕರಾವಳಿ ಟೈಮ್ಸ್) : ಭಾರತದಾದ್ಯಂತ ನಡೆಯುತ್ತಿರುವ ವಿಶೇಷ ಅಭಿಯಾನ 6.0 ರ ಅಂಗವಾಗಿ, ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿವಿಧ ರೈಲು ನಿಲ್ದಾಣಗಳಲ್ಲಿ 2026ರ ಅಕ್ಟೋಬರ್ 22 ರಂದು ‘ರೈಲ್ ಜನ ಸಂವಾದ’ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ರೈಲ್ವೆ ಅಧಿಕಾರಿಗಳು ಮತ್ತು ಪ್ರಯಾಣಿಕರ ನಡುವೆ ನೇರ ಸಂವಾದಕ್ಕೆ ಅವಕಾಶ ಕಲ್ಪಿಸುವುದು, ರೈಲ್ವೆ ಸೇವೆಗಳು ಹಾಗೂ ಪ್ರಯಾಣಿಕರ ಸೌಲಭ್ಯಗಳ ಕುರಿತು ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸುವುದು, ಸುಧಾರಣೆ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸುವುದು ಹಾಗೂ ರೈಲು ನಿಲ್ದಾಣಗಳ ಸ್ವಚ್ಛತೆಯನ್ನು ಕಾಪಾಡುವಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.

ಮೈಸೂರು ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್, ಹಿರಿಯ ವಿಭಾಗೀಯ ಯಾಂತ್ರಿಕ ಇಂಜಿನಿಯರ್, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕರು, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಸೇರಿದಂತೆ ಇತರ ರೈಲ್ವೆ ಅಧಿಕಾರಿಗಳು ಭಾಗವಹಿಸಿದ್ದರು. ಸುಮಾರು ಒಂದು ಗಂಟೆ ನಡೆದ ಸಂವಾದದಲ್ಲಿ ಅಧಿಕಾರಿಗಳು ಪ್ರಯಾಣಿಕರೊಂದಿಗೆ ನೇರವಾಗಿ ಮಾತನಾಡಿ, ನಿಲ್ದಾಣದಲ್ಲಿನ ಸೌಲಭ್ಯಗಳು, ಸ್ವಚ್ಛತೆ, ನೈರ್ಮಲ್ಯ ಹಾಗೂ ರೈಲುಗಳ ಒಳಗಿನ ಸ್ವಚ್ಛತೆಯ ಕುರಿತು ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದರು. ರೈಲು ಟಿಕೆಟ್ ಗಳಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಮರುಸ್ಥಾಪಿಸುವ ವಿಷಯವನ್ನೂ ಪ್ರಯಾಣಿಕರು ಪ್ರಸ್ತಾಪಿಸಿ, ಈ ಕುರಿತು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದರು. ಮೈಸೂರು ರೈಲು ನಿಲ್ದಾಣದಲ್ಲಿ ಕಾಪಾಡಿಕೊಂಡಿರುವ ಸ್ವಚ್ಛತೆ ಮತ್ತು ನಿರ್ವಹಣೆಯ ಬಗ್ಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ 35 ಭೌತಿಕ ಅಭಿಪ್ರಾಯ ಪತ್ರಗಳನ್ನು ಸಂಗ್ರಹಿಸಲಾಗಿದ್ದು, ಆನ್ ಲೈನ್ ಮೂಲಕ ಸುಮಾರು 15 ಪ್ರತಿಕ್ರಿಯೆಗಳು ಲಭಿಸಿವೆ.

ಅಶೋಕಪುರಂ ರೈಲು ನಿಲ್ದಾಣದಲ್ಲಿ ಮುಖ್ಯ ಆರೋಗ್ಯ ನಿರೀಕ್ಷಕರು, ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಮತ್ತು ನಿಲ್ದಾಣದ ಸಿಬ್ಬಂದಿ ಜಂಟಿಯಾಗಿ ರೈಲ್ ಜನ ಸಂವಾದ ಕಾರ್ಯಕ್ರಮವನ್ನು ನಡೆಸಿದರು. ಇದರಲ್ಲಿ ಪ್ರಯಾಣಿಕರು ಸಕ್ರಿಯವಾಗಿ ಭಾಗವಹಿಸಿ, ನಿಲ್ದಾಣದ ಸ್ವಚ್ಛತೆ ಹಾಗೂ ಸುಧಾರಣೆ ಅಗತ್ಯವಿರುವ ಕ್ಷೇತ್ರಗಳ ಕುರಿತು ಸಲಹೆಗಳನ್ನು ನೀಡಿದರು. ಘನತ್ಯಾಜ್ಯ ನಿರ್ವಹಣೆ, ಕಸವನ್ನು ಸರಿಯಾಗಿ ವಿಂಗಡಿಸುವುದು, ನಿಗದಿಪಡಿಸಿದ ಕಸದ ತೊಟ್ಟಿಗಳನ್ನು ಬಳಸುವುದು ಮತ್ತು ನಿಲ್ದಾಣದ ಒಳಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಪ್ರಯಾಣಿಕರು, ವ್ಯಾಪಾರಿಗಳು ಮತ್ತು ರೈಲ್ವೆ ಸಿಬ್ಬಂದಿಗೆ ಜಾಗೃತಿ ಮೂಡಿಸಲಾಯಿತು.

ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ವಿಭಾಗೀಯ ಇಂಜಿನಿಯರ್, ನಿಲ್ದಾಣ ವ್ಯವಸ್ಥಾಪಕರು, ವಿದ್ಯುತ್, ಕಾಮಗಾರಿ ಹಾಗೂ ಕ್ಯಾರೇಜ್ ಮತ್ತು ವ್ಯಾಗನ್ ವಿಭಾಗಗಳ ಹಿರಿಯ ವಿಭಾಗೀಯ ಇಂಜಿನಿಯರ್ ಗಳು, ಆರೋಗ್ಯ ನಿರೀಕ್ಷಕರು ಮತ್ತು ಇತರ ರೈಲ್ವೆ ಸಿಬ್ಬಂದಿ ಭಾಗವಹಿಸಿದ್ದರು. ಸುಮಾರು 50 ಪ್ರಯಾಣಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿಲ್ದಾಣದ ಸೌಲಭ್ಯಗಳು ಮತ್ತು ರೈಲ್ವೆ ಸೇವೆಗಳ ಕುರಿತು ತಮ್ಮ ಅಭಿಪ್ರಾಯ, ಪ್ರತಿಕ್ರಿಯೆ ಹಾಗೂ ಸಲಹೆಗಳನ್ನು ಹಂಚಿಕೊಂಡರು. ಒಟ್ಟು 21 ಭೌತಿಕ ಅಭಿಪ್ರಾಯ ಪತ್ರಗಳನ್ನು ಸಂಗ್ರಹಿಸಲಾಗಿದ್ದು, ಆನ್ ಲೈನ್ ಮೂಲಕ ಸುಮಾರು 20 ಪ್ರತಿಕ್ರಿಯೆಗಳು ಲಭಿಸಿವೆ. ಸ್ವೀಕರಿಸಿದ ಸಲಹೆಗಳನ್ನು ದಾಖಲಿಸಿಕೊಂಡು, ಅಗತ್ಯವಿರುವ ಕಡೆಗಳಲ್ಲಿ ಸಂಬಂಧಿತ ಇಲಾಖೆಗಳ ಮೂಲಕ ಮುಂದಿನ ಕ್ರಮ ಕೈಗೊಳ್ಳಲು ಪರಿಗಣಿಸಲಾಗುವುದು.

ಅರಸೀಕೆರೆ ರೈಲು ನಿಲ್ದಾಣದಲ್ಲಿಯೂ ವಿಶೇಷ ಅಭಿಯಾನ 6.0 ರ ಅಂಗವಾಗಿ ರೈಲ್ ಜನ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರೈಲ್ವೆ ಸಿಬ್ಬಂದಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿ, ಅವರಿಂದ ಭೌತಿಕ ಅಭಿಪ್ರಾಯ ಪತ್ರಗಳನ್ನು ಸಂಗ್ರಹಿಸಿದರು. ಕ್ಯೂ ಆರ್ ಕೋಡ್ ಮೂಲಕ ಸಂಪರ್ಕ ಕಲ್ಪಿಸಲಾದ ಗೂಗಲ್ ಫಾರ್ಮ್ ಗಳಲ್ಲಿ ತಮ್ಮ ಸಲಹೆಗಳನ್ನು ದಾಖಲಿಸುವಂತೆ ಪ್ರಯಾಣಿಕರನ್ನು ಪೆÇ್ರೀತ್ಸಾಹಿಸಲಾಯಿತು. ಕಾರ್ಯಕ್ರಮದ ಭಾಗವಾಗಿ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಗಳನ್ನೂ ಕೈಗೊಳ್ಳಲಾಯಿತು.

ದಾವಣಗೆರೆ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆಯ ಮುಖ್ಯ ಟ್ರ್ಯಾಕ್ ಇಂಜಿನಿಯರ್ ಟಿ.ವಿ. ಭೂಷಣ್, ದಾವಣಗೆರೆಯ ಸಹಾಯಕ ವಿಭಾಗೀಯ ಇಂಜಿನಿಯರ್ ಅಭಯ್ ಬಾಗ್ಡೆ, ಸಹಾಯಕ ವಿಭಾಗೀಯ ಸಿಗ್ನಲ್ ಮತ್ತು ದೂರಸಂಪರ್ಕ ಇಂಜಿನಿಯರ್ ಪ್ರಸಾದ್ ನಾಯ್ಕ್, ನಿಲ್ದಾಣ ವ್ಯವಸ್ಥಾಪಕ ಎಚ್. ಕರಿಬಸಪ್ಪ, ಮುಖ್ಯ ಆರೋಗ್ಯ ನಿರೀಕ್ಷಕರು ಶ್ರೀನಿವಾಸ್ ಹಾಗೂ ಇತರ ರೈಲ್ವೆ ಸಿಬ್ಬಂದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಯಾಣಿಕರಿಂದ ಭೌತಿಕ ಅಭಿಪ್ರಾಯ ಪತ್ರಗಳು ಮತ್ತು ಆನ್ ಲೈನ್ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಯಿತು. ಒಟ್ಟು 8 ಭೌತಿಕ ಅಭಿಪ್ರಾಯ ಪತ್ರಗಳು ಲಭಿಸಿದ್ದು, ಆನ್ ಲೈನ್ ಮೂಲಕ ಸುಮಾರು 50 ರಿಂದ 55 ಪ್ರತಿಕ್ರಿಯೆಗಳು ದಾಖಲಾಗಿವೆ.

ಇದಲ್ಲದೆ, ಮಂಗಳೂರು, ಹರಿಹರ, ಹಾವೇರಿ, ಹಾಸನ, ತಾಳಗುಪ್ಪ ಮತ್ತು ತರೀಕೆರೆ ಸೇರಿದಂತೆ ಮೈಸೂರು ವಿಭಾಗದ ಇತರ ರೈಲು ನಿಲ್ದಾಣಗಳಲ್ಲಿಯೂ ರೈಲ್ ಜನ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದರಿಂದ ವಿಭಾಗದ ವಿವಿಧ ಸ್ಥಳಗಳ ಪ್ರಯಾಣಿಕರಿಗೆ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೇರವಾಗಿ ತಿಳಿಸಲು ಅವಕಾಶ ದೊರೆಯಿತು.

ರೈಲ್ ಜನ ಸಂವಾದ ಕಾರ್ಯಕ್ರಮವು ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಅನುಭವಗಳನ್ನು ಹಂಚಿಕೊಳ್ಳಲು, ಸಮಸ್ಯೆಗಳನ್ನು ಪ್ರಸ್ತಾಪಿಸಲು ಹಾಗೂ ರೈಲ್ವೆ ಸೇವೆಗಳಲ್ಲಿ ಸುಧಾರಣೆ ತರಲು ಸಲಹೆಗಳನ್ನು ನೀಡಲು ಉತ್ತಮ ವೇದಿಕೆಯಾಯಿತು. ಪ್ರಯಾಣಿಕರ ಸೌಲಭ್ಯಗಳು, ಸ್ವಚ್ಛತೆ, ನೈರ್ಮಲ್ಯ ಮತ್ತು ನಿಲ್ದಾಣಗಳಲ್ಲಿನ ಇತರ ಮೂಲಭೂತ ಸೌಲಭ್ಯಗಳ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಈ ಪ್ರತಿಕ್ರಿಯೆಗಳ ಆಧಾರದ ಮೇಲೆ ಸುಧಾರಣೆ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸಿ, ಸಂಬಂಧಿತ ರೈಲ್ವೆ ಇಲಾಖೆಗಳು ಅಗತ್ಯ ಕ್ರಮಗಳನ್ನು ಪರಿಗಣಿಸಲು ಅನುಕೂಲವಾಗಲಿದೆ.

ವಿಶೇಷ ಅಭಿಯಾನ 6.0ರ ಅಡಿಯಲ್ಲಿ ರೈಲ್ ಜನ ಸಂವಾದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ, ಪ್ರಯಾಣಿಕ ಸ್ನೇಹಿ ಸೇವೆಗಳನ್ನು ಒದಗಿಸುವುದು, ಸ್ವಚ್ಛತೆಯನ್ನು ಮತ್ತಷ್ಟು ಸುಧಾರಿಸುವುದು, ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುವುದು ಹಾಗೂ ರೈಲ್ವೆ ಸೇವೆಗಳ ಸುಧಾರಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವ ತನ್ನ ಬದ್ಧತೆಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪುನರುಚ್ಚರಿಸಿದೆ ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ರೈಲ್ವೆ ಮೈಸೂರು ವಿಭಾಗದಾದ್ಯಂತ ‘ರೈಲ್ ಜನ ಸಂವಾದ’ ಕಾರ್ಯಕ್ರಮ ಆಯೋಜನೆ, ಪ್ರಯಾಣಿಕರ ಸೌಲಭ್ಯ ಮತ್ತು ಸ್ವಚ್ಛತೆ ಸುಧಾರಣೆಗೆ ಒತ್ತು Rating: 5 Reviewed By: karavali Times
Scroll to Top