ಡಿಜಿಟಲ್ ಟಿಕೆಟ್ ವ್ಯವಸ್ಥೆಯಲ್ಲಿ ರೈಲ್ವೆ ಮೈಸೂರು ವಿಭಾಗದ ಐತಿಹಾಸಿಕ ಸಾಧನೆ - Karavali Times ಡಿಜಿಟಲ್ ಟಿಕೆಟ್ ವ್ಯವಸ್ಥೆಯಲ್ಲಿ ರೈಲ್ವೆ ಮೈಸೂರು ವಿಭಾಗದ ಐತಿಹಾಸಿಕ ಸಾಧನೆ - Karavali Times

728x90

22 October 2026

ಡಿಜಿಟಲ್ ಟಿಕೆಟ್ ವ್ಯವಸ್ಥೆಯಲ್ಲಿ ರೈಲ್ವೆ ಮೈಸೂರು ವಿಭಾಗದ ಐತಿಹಾಸಿಕ ಸಾಧನೆ

ಮೈಸೂರು, ಅಕ್ಟೋಬರ್ 22, 2026 (ಕರಾವಳಿ ಟೈಮ್ಸ್) : ದಸರಾ ಹಬ್ಬದ ಅತ್ಯಧಿಕ ಜನಸಂದಣಿಯ ದಿನದಂದು ಮೈಸೂರು ರೈಲು ನಿಲ್ದಾಣದ ಮೂಲಕ ಸುಮಾರು ಒಂದು ಲಕ್ಷ ಪ್ರಯಾಣಿಕರು ಸಂಚರಿಸಿದರು. ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳ ಬಳಕೆ ಶೇ. 33.23 ರಷ್ಟು ಹೆಚ್ಚಾಗಿದ್ದು, ಅವುಗಳ ಮೂಲಕದ ಆದಾಯದಲ್ಲಿ ಶೇ. 32.10ರಷ್ಟು ಏರಿಕೆಯಾಗಿದೆ.

ಡಿಜಿಟಲ್ ಮತ್ತು ಸ್ವಯಂ ಸೇವಾ ಟಿಕೆಟ್ ವ್ಯವಸ್ಥೆಗಳ ಹೆಚ್ಚಿದ ಬಳಕೆಯಿಂದ ಟಿಕೆಟ್ ಕೌಂಟರ್ ಗಳಲ್ಲಿನ ಸರತಿ ಸಾಲುಗಳು ಕಡಿಮೆಯಾಗಿ, ನಿಲ್ದಾಣದ ಮುಖ್ಯ ಪ್ರವೇಶ ಹಾಗೂ ಪ್ಲಾಟ್ ಫಾರ್ಮ್ ಪ್ರವೇಶ ಮಾರ್ಗಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಸಹಕಾರಿಯಾಯಿತು.

ಮೈಸೂರು ದಸರಾ ಮಹೋತ್ಸವದ ಪ್ರಮುಖ ದಿನವಾದ ಅಕ್ಟೋಬರ್ 21 ರಂದು, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು ರೈಲು ನಿಲ್ದಾಣದಲ್ಲಿ ಉಂಟಾದ ಭಾರಿ ಪ್ರಯಾಣಿಕರ ದಟ್ಟಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಅಂದು ನಿಲ್ದಾಣದ ಮೂಲಕ ಸುಮಾರು ಒಂದು ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಸಮರ್ಥ ಜನಸಂದಣಿ ನಿರ್ವಹಣೆ ಮತ್ತು ಸುಲಭ ಟಿಕೆಟ್ ವ್ಯವಸ್ಥೆಗಳ ಅಗತ್ಯವನ್ನು ಇದು ಎತ್ತಿ ತೋರಿಸಿದೆ.

ಟಿಕೆಟ್ ವಿತರಣೆಯಲ್ಲಿ ಮಹತ್ವದ ಸಾಧನೆ ದಾಖಲಾಗಿದ್ದು, ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಿದವರಲ್ಲಿ ಶೇ. 53.4ರಷ್ಟು ಪ್ರಯಾಣಿಕರು ಡಿಜಿಟಲ್ ಮತ್ತು ಸ್ವಯಂ ಸೇವಾ ಟಿಕೆಟ್ ವ್ಯವಸ್ಥೆಗಳನ್ನು ಬಳಸಿದ್ದಾರೆ. ಈ ವ್ಯವಸ್ಥೆಗಳಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳು ಮತ್ತು ಯುಟಿಎಸ್ ಮೊಬೈಲ್ ಆಪ್ ಸೇರಿವೆ. ಈ ವ್ಯವಸ್ಥೆಗಳ ಹೆಚ್ಚಿದ ಬಳಕೆಯಿಂದ ಸಾಂಪ್ರದಾಯಿಕ ಟಿಕೆಟ್ ಕೌಂಟರ್ ಗಳ ಮೇಲಿನ ಅವಲಂಬನೆ ಕಡಿಮೆಯಾಗಿ, ಪ್ರಯಾಣಿಕರ ಸಂಚಾರ ಸುಗಮವಾಗಲು ಮತ್ತು ಹಬ್ಬದ ಜನದಟ್ಟಣೆಯ ನಡುವೆಯೂ ಉತ್ತಮ ಪ್ರಯಾಣಾನುಭವ ಒದಗಿಸಲು ಸಹಕಾರಿಯಾಯಿತು.

ದಸರಾ-2026ರ ಕಾರ್ಯಾಚರಣೆಯ ಪ್ರಮುಖ ಮುಖ್ಯಾಂಶಗಳು : 

1. ಸ್ವಯಂಚಾಲಿತ ಟಿಕೆಟ್ ಯಂತ್ರಗಳ ಬಳಕೆಯಲ್ಲಿ ಗಣನೀಯ ಏರಿಕೆ : ದಸರಾ ಸಂದರ್ಭದಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳು ಪ್ರಯಾಣಿಕರಿಗೆ ಪ್ರಮುಖ ಟಿಕೆಟ್ ಪಡೆಯುವ ಸೌಲಭ್ಯವಾಗಿ ಹೊರಹೊಮ್ಮಿವೆ. 2025ರಲ್ಲಿ ಈ ಯಂತ್ರಗಳ ಮೂಲಕ 13,285 ಪ್ರಯಾಣಿಕರು ಟಿಕೆಟ್ ಪಡೆದಿದ್ದರೆ, 2026ರ ಅಕ್ಟೋಬರ್ 21ರಂದು ಈ ಸಂಖ್ಯೆ 17,700ಕ್ಕೆ ಏರಿಕೆಯಾಗಿದೆ. ಇದು ಶೇ. 33.23ರಷ್ಟು ಹೆಚ್ಚಳವಾಗಿದೆ. ಈ ಯಂತ್ರಗಳ ಮೂಲಕ ಸಂಗ್ರಹವಾದ ಆದಾಯವೂ ಶೇ. 32.10ರಷ್ಟು ಹೆಚ್ಚಾಗಿ 10.61 ಲಕ್ಷ ತಲುಪಿದೆ. ಯಂತ್ರಗಳಲ್ಲಿಯೇ ಯುಪಿಐ ಕ್ಯೂ ಆರ್ ಕೋಡ್ ಮೂಲಕ ಹಣ ಪಾವತಿಸುವ ಸೌಲಭ್ಯ ಇರುವುದರಿಂದ ಪ್ರಯಾಣಿಕರು ತ್ವರಿತವಾಗಿ ಮತ್ತು ಸುಲಭವಾಗಿ ಟಿಕೆಟ್ ಖರೀದಿಸಲು ಸಾಧ್ಯವಾಯಿತು.

2. ಮೊಬೈಲ್ ಆಪ್ ಮೂಲಕ ಟಿಕೆಟ್ ಪಡೆಯುವವರ ಸಂಖ್ಯೆ ಹೆಚ್ಚಳ : ಯುಟಿಎಸ್ ಮೊಬೈಲ್ ಪ್ ಮೂಲಕ ಟಿಕೆಟ್ ಪಡೆಯುವವರ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿದೆ. 2026ರಲ್ಲಿ ಈ ಆಪ್ ಬಳಸಿದ ಪ್ರಯಾಣಿಕರ ಸಂಖ್ಯೆ 5,495ಕ್ಕೆ ತಲುಪಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 13.04ರಷ್ಟು ಹೆಚ್ಚಳವಾಗಿದೆ. ಆಪ್ ಮೂಲಕ ಕಾಯ್ದಿರಿಸಿದ ಟಿಕೆಟ್‍ಗಳ ಸಂಖ್ಯೆಯಲ್ಲಿಯೂ ಶೇ. 18.72ರಷ್ಟು ಏರಿಕೆ ದಾಖಲಾಗಿದೆ ಎಂದು ವರದಿಯಾಗಿದೆ. ಈ ಆಪ್ ಮೂಲಕ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಬರುವ ಮೊದಲೇ ತಮ್ಮ ಮೊಬೈಲ್ ಫೆÇೀನ್ ಗಳಲ್ಲಿ ಕಾಗದ ರಹಿತ ಟಿಕೆಟ್‍ಗಳನ್ನು ಪಡೆಯಬಹುದು. ಇದರಿಂದ ಟಿಕೆಟ್ ಕೌಂಟರ್ ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯ ಕಡಿಮೆಯಾಗುತ್ತದೆ. ಜೊತೆಗೆ, ಡಿಜಿಟಲ್ ಹಾಗೂ ಪರಿಸರ ಸ್ನೇಹಿ ಪ್ರಯಾಣಕ್ಕೆ ಉತ್ತೇಜನ ದೊರೆಯುತ್ತದೆ.

3. ಸಾಂಪ್ರದಾಯಿಕ ಟಿಕೆಟ್ ಕೌಂಟರ್ ಗಳ ಮೇಲಿನ ಅವಲಂಬನೆ ಕಡಿತ : ಸ್ವಯಂ ಸೇವಾ ಟಿಕೆಟ್ ವ್ಯವಸ್ಥೆಗಳ ಬಳಕೆ ಹೆಚ್ಚಾದ ಪರಿಣಾಮ, ಸಾಂಪ್ರದಾಯಿಕ ಟಿಕೆಟ್ ಕೌಂಟರ್ ಗಳ ಮೂಲಕ ಟಿಕೆಟ್ ಪಡೆಯುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. 2025ರಲ್ಲಿ 26,180 ಪ್ರಯಾಣಿಕರು ಟಿಕೆಟ್ ಕೌಂಟರ್ ಗಳನ್ನು ಬಳಸಿದ್ದರೆ, 2026ರಲ್ಲಿ ಈ ಸಂಖ್ಯೆ 20,018ಕ್ಕೆ ಇಳಿದಿದೆ. ಇದು ಶೇ. 23.54ರಷ್ಟು ಕಡಿತವಾಗಿದೆ. ಟಿಕೆಟ್ ಕೌಂಟರ್ ಗಳಲ್ಲಿನ ವಹಿವಾಟುಗಳ ಸಂಖ್ಯೆಯೂ ಶೇ. 20.14 ರಷ್ಟು ಕಡಿಮೆಯಾಗಿದೆ. ಇದರಿಂದ ಟಿಕೆಟ್ ಕೌಂಟರ್ ಗಳ ಸುತ್ತಲಿನ ಜನಸಂದಣಿ ಕಡಿಮೆಯಾಗಿ, ನಿಲ್ದಾಣದ ಒಳಭಾಗದಲ್ಲಿ ಪ್ರಯಾಣಿಕರ ಸಂಚಾರ ಸುಗಮವಾಗಲು ಮತ್ತು ಪ್ಲಾಟ್ ಫಾರ್ಮ್ ಗಳಿಗೆ ಕ್ರಮಬದ್ಧವಾಗಿ ತೆರಳಲು ಸಹಕಾರಿಯಾಗಿದೆ.

4. ಕೈಗೆಟುಕುವ ದರದಲ್ಲಿ ಪ್ರಾದೇಶಿಕ ರೈಲು ಪ್ರಯಾಣ : ದಸರಾ ಹಬ್ಬದ ಅತ್ಯಧಿಕ ಜನಸಂದಣಿಯ ದಿನದಂದು, ಒಟ್ಟು 23,277 ಅನಿರ್ದಿಷ್ಟ ಆಸನದ ಟಿಕೆಟ್‍ಗಳ ಮೂಲಕ 25.33 ಲಕ್ಷ ಆದಾಯ ಸಂಗ್ರಹವಾಗಿದೆ. 2025ರಲ್ಲಿ ಇದೇ ಅವಧಿಯಲ್ಲಿ 28.56 ಲಕ್ಷ ಆದಾಯ ಸಂಗ್ರಹವಾಗಿತ್ತು. ಹೀಗಾಗಿ ಆದಾಯದಲ್ಲಿ ಶೇ. 11.33ರಷ್ಟು ಇಳಿಕೆಯಾಗಿದೆ. ಪ್ರತಿ ಟಿಕೆಟಿನ ಸರಾಸರಿ ಆದಾಯವು 2025ರಲ್ಲಿ 63.70 ಇದ್ದರೆ, 2026ರಲ್ಲಿ 58.28ಕ್ಕೆ ಇಳಿದಿದೆ. ಈ ಅಂಕಿ ಅಂಶಗಳು ಟಿಕೆಟಿನ ಸರಾಸರಿ ಮೌಲ್ಯದಲ್ಲಿ ಬದಲಾವಣೆಯಾಗಿರುವುದನ್ನು ಸೂಚಿಸುತ್ತವೆ. ಕಡಿಮೆ ದೂರದ ಪ್ರಯಾಣಗಳ ಪ್ರಮಾಣದಲ್ಲಿನ ಬದಲಾವಣೆಯೂ ಇದಕ್ಕೆ ಕಾರಣವಾಗಿರಬಹುದು. ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಹಬ್ಬವಾದ ದಸರಾ ಸಂದರ್ಭದಲ್ಲಿ ಮಂಡ್ಯ, ರಾಮನಗರ ಮತ್ತು ಬೆಂಗಳೂರಿನಂತಹ ಸ್ಥಳಗಳಿಗೆ ಪ್ರಯಾಣಿಸುವವರಿಗೆ ಕೈಗೆಟುಕುವ ದರದಲ್ಲಿ ಅನುಕೂಲಕರ ಸಾರಿಗೆ ಒದಗಿಸುವಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸಿದೆ.

ವ್ಯವಸ್ಥೆಗಳ ಕುರಿತು ಪ್ರತಿಕ್ರಿಯಿಸುತ್ತಾ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ಅವರು “ದಸರಾ-2026ರ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಮತ್ತು ಟಿಕೆಟ್ ಕೌಂಟರ್‍ಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡುವುದಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ. ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಿದವರಲ್ಲಿ ಶೇ. 53.4 ರಷ್ಟು ಪ್ರಯಾಣಿಕರು ಡಿಜಿಟಲ್ ಮತ್ತು ಸ್ವಯಂ ಸೇವಾ ಟಿಕೆಟ್ ವ್ಯವಸ್ಥೆಗಳನ್ನು ಬಳಸಿರುವುದು, ರೈಲ್ವೆ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಮಹತ್ವದ ಸಾಧನೆಯಾಗಿದೆ.

ಅತ್ಯಧಿಕ ಜನಸಂದಣಿಯ ದಿನದಂದು ಮೈಸೂರು ರೈಲು ನಿಲ್ದಾಣದ ಮೂಲಕ ಸುಮಾರು ಒಂದು ಲಕ್ಷ ಪ್ರಯಾಣಿಕರು ಸಂಚರಿಸಿದ್ದರಿಂದ, ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸುವುದು ಮತ್ತು ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸುವುದು ಅತ್ಯಂತ ಮುಖ್ಯವಾಗಿತ್ತು. ಸ್ವಯಂಚಾಲಿತ ಟಿಕೆಟ್ ಯಂತ್ರಗಳು ಹಾಗೂ ಮೊಬೈಲ್ ಆಪ್ ಮೂಲಕ ಟಿಕೆಟ್ ಪಡೆಯುವವರ ಸಂಖ್ಯೆ ಹೆಚ್ಚಾಗಿರುವುದರಿಂದ, ಸಾಂಪ್ರದಾಯಿಕ ಟಿಕೆಟ್ ಕೌಂಟರ್ ಗಳ ಮೇಲಿನ ಅವಲಂಬನೆ ಕಡಿಮೆಯಾಗಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಡಿಜಿಟಲ್ ಮತ್ತು ಕಾಗದ ರಹಿತ ಟಿಕೆಟ್ ವ್ಯವಸ್ಥೆಗಳನ್ನು ಸ್ವೀಕರಿಸಿ, ದಸರಾ ಸಂದರ್ಭದಲ್ಲಿ ಸುರಕ್ಷಿತ, ಸುಗಮ ಮತ್ತು ಕ್ರಮಬದ್ಧ ಪ್ರಯಾಣಕ್ಕೆ ಸಹಕರಿಸಿದ ಎಲ್ಲ ಪ್ರಯಾಣಿಕರಿಗೂ ನಮ್ಮ ಧನ್ಯವಾದಗಳು. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಸುರಕ್ಷಿತ, ಸುಗಮ, ಸುಲಭವಾಗಿ ಲಭ್ಯವಾಗುವ ಮತ್ತು ಪ್ರಯಾಣಿಕ ಸ್ನೇಹಿ ರೈಲು ಸೇವೆಗಳನ್ನು ಒದಗಿಸಲು ಬದ್ಧವಾಗಿದೆ ಎಂದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಡಿಜಿಟಲ್ ಟಿಕೆಟ್ ವ್ಯವಸ್ಥೆಯಲ್ಲಿ ರೈಲ್ವೆ ಮೈಸೂರು ವಿಭಾಗದ ಐತಿಹಾಸಿಕ ಸಾಧನೆ Rating: 5 Reviewed By: karavali Times
Scroll to Top