ಬೆಂಗಳೂರು, ಅಕ್ಟೋಬರ್ 06, 2026 (ಕರಾವಳಿ ಟೈಮ್ಸ್) : ರೈಲು ಸಂಖ್ಯೆ 16585ರಲ್ಲಿ ಲ್ಯಾಪ್ ಟಾಪ್ ಬ್ಯಾಗ್ ಕಾಣೆಯಾಗಿರುವ ಕುರಿತು ಸ್ವೀಕರಿಸಲಾದ ರೈಲ್ ಮದದ್ ದೂರಿನ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಕರ್ತವ್ಯನಿರತ ಟಿಟಿಇ ಚಂದ್ರ ನಾಯಕ್ ಅವರು ಲ್ಯಾಪ್ ಟಾಪ್ ಕಳವುಗೈದ ವ್ಯಕ್ತಿಯನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ಹಸ್ತಾಂತರಿಸುವಲ್ಲಿ ಸಫಲರಾಗಿದ್ದಾರೆ.
ದೂರುದಾರ ಅಭಿಷೇಕ್ ಅವರು ರೈಲು ಸಂಖ್ಯೆ 16585ರಲ್ಲಿ ಹೊಳೆನರಸೀಪುರದಿಂದ ಮಂಗಳೂರು ಜಂಕ್ಷನ್ ವರೆಗೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ಸಂದರ್ಭದಲ್ಲಿ ತಮ್ಮ ಬರ್ತ್ ನಲ್ಲಿದ್ದ ಲ್ಯಾಪ್ ಟಾಪ್ ಬ್ಯಾಗ್ ಕಾಣೆಯಾಗಿರುವುದು ಅವರ ಗಮನಕ್ಕೆ ಬಂದಿದೆ.
ಕಾಣೆಯಾಗಿದ್ದ ಬ್ಯಾಗ್‍ನಲ್ಲಿ ಸುಮಾರು 80 ಸಾವಿರ ರೂಪಾಯಿ ಮೌಲ್ಯದ ಲೆನೊವೊ ಲ್ಯಾಪ್ ಟಾಪ್, ಲ್ಯಾಪ್ ಟಾಪ್ ಚಾರ್ಜರ್, ಬಂಗಾರದ ಸರ, ಕೈಗಡಿಯಾರ ಹಾಗೂ ಗುರುತಿನ ಚೀಟಿಗಳು ಇದ್ದವು ಎಂದು ದೂರುದಾರರು ತಿಳಿಸಿದ್ದರು. ಹೊಳೆನರಸೀಪುರ ಮತ್ತು ಸಕಲೇಶಪುರ ನಿಲ್ದಾಣಗಳ ನಡುವಿನ ಯಾವುದೋ ಸ್ಥಳದಲ್ಲಿ ಬ್ಯಾಗ್ ಕಾಣೆಯಾಗಿರಬಹುದು ಎಂದು ಅವರು ಶಂಕಿಸಿದ್ದರು. ಆದರೆ ಘಟನೆ ನಡೆದ ನಿಖರ ಸ್ಥಳವನ್ನು ಖಚಿತಪಡಿಸಲು ಸಾಧ್ಯವಾಗಿರಲಿಲ್ಲ.
ನಂತರ ನಡೆಸಿದ ತಪಾಸಣೆಯ ಸಂದರ್ಭದಲ್ಲಿ, ರೈಲು ಸಂಖ್ಯೆ 17302 (ಬೆಳಗಾವಿ-ಮೈಸೂರು) ರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ವರ್ತನೆಯ ಬಗ್ಗೆ ಕರ್ತವ್ಯನಿರತ ಟಿಟಿಇ ಚಂದ್ರ ನಾಯಕ್ ಅವರಿಗೆ ಅನುಮಾನ ಮೂಡಿತು. ತಕ್ಷಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ ಅವರು ಆ ವ್ಯಕ್ತಿಯನ್ನು ವಶಕ್ಕೆ ಪಡೆದು ಕೆ.ಆರ್. ನಗರದಲ್ಲಿರುವ ಆರ್ ಪಿ ಎಫ್ ಔಟ್ ಪೆÇೀಸ್ಟಿಗೆ ಹಸ್ತಾಂತರಿಸಿದರು.
ವಿಚಾರಣೆಯ ವೇಳೆ, ಆ ವ್ಯಕ್ತಿಯು ಹೊಳೆನರಸೀಪುರ ಮತ್ತು ಹಾಸನ ನಡುವಿನ ರೈಲು ಮಾರ್ಗದಲ್ಲಿ ರೈಲು ಸಂಖ್ಯೆ 16585ರಿಂದ ಲ್ಯಾಪ್ ಟಾಪ್ ಬ್ಯಾಗ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ವಶಕ್ಕೆ ಪಡೆದ ವ್ಯಕ್ತಿಯನ್ನು ಬಸವರಾಜ ಎಂದು ಗುರುತಿಸಲಾಗಿದೆ.
ಹೆಚ್ಚಿನ ತನಿಖೆ ಹಾಗೂ ಅಗತ್ಯ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆದ ವ್ಯಕ್ತಿಯನ್ನು ಕೆ.ಆರ್. ನಗರ ಸರ್ಕಾರಿ ರೈಲ್ವೆ ಪೆÇಲೀಸ್ (ಜಿ ಆರ್ ಪಿ) ಠಾಣೆಯ ಪೆÇಲೀಸ್ ಉಪನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ. ಪತ್ತೆಯಾದ ವಸ್ತುಗಳನ್ನು ಸೂಕ್ತ ಪರಿಶೀಲನೆ ಮತ್ತು ವಾರಸುದಾರರ ದೃಢೀಕರಣದ ನಂತರ ನಿಜವಾದ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಪ್ರಯಾಣಿಕರ ವಸ್ತುಗಳನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಸಮಯಪ್ರಜ್ಞೆ ಹಾಗೂ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿದ ಕರ್ತವ್ಯನಿರತ ಟಿಟಿಇ ಚಂದ್ರ ನಾಯಕ್ ಅವರ ಕಾರ್ಯವೈಖರಿಯನ್ನು ದಕ್ಷಿಣ ಪಶ್ಚಿಮ ರೈಲ್ವೆ ಶ್ಲಾಘಿಸಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಅವರ ವಸ್ತುಗಳ ಭದ್ರತೆಗೆ ನೈಋತ್ಯ ರೈಲ್ವೆ ಸದಾ ಹೆಚ್ಚಿನ ಆದ್ಯತೆ ನೀಡುತ್ತದೆ. ಪ್ರಯಾಣಿಕರು ತಮ್ಮ ಅಮೂಲ್ಯ ವಸ್ತುಗಳನ್ನು ಪ್ರಯಾಣದ ವೇಳೆ ಸುರಕ್ಷಿತವಾಗಿ ತಮ್ಮ ಬಳಿ ಇಟ್ಟುಕೊಳ್ಳಬೇಕು ಹಾಗೂ ಯಾವುದೇ ಕಳ್ಳತನ, ವಸ್ತು ನಷ್ಟ ಅಥವಾ ಭದ್ರತಾ ಸಮಸ್ಯೆ ಎದುರಾದಲ್ಲಿ ತಕ್ಷಣ ರೈಲ್ ಮದದ್ (139) ಮೂಲಕ ದೂರು ದಾಖಲಿಸಬೇಕು ಅಥವಾ ಸಮೀಪದ ರೈಲ್ವೆ ಸಿಬ್ಬಂದಿ/ ಆರ್ ಪಿ ಎಫ್ ಸಿಬ್ಬಂದಿಯನ್ನು ಸಂಪರ್ಕಿಸಿ ಸಹಾಯ ಪಡೆಯಬೇಕು ಎಂದು ಮೈಸೂರು ವಿಭಾಗೀಯ ರೈಲ್ವೆ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಅವರು ತಿಳಿಸಿದ್ದಾರೆ.














0 comments:
Post a Comment