ಸಾಕು ನಾಯಿ ಮಾಲಕರಿಗೆ ನಗರ ಪಾಲಿಕೆ ಸೂಚನೆ : ನಿಯಮ ಪಾಲನೆ ಕಡ್ಡಾಯ - Karavali Times ಸಾಕು ನಾಯಿ ಮಾಲಕರಿಗೆ ನಗರ ಪಾಲಿಕೆ ಸೂಚನೆ : ನಿಯಮ ಪಾಲನೆ ಕಡ್ಡಾಯ - Karavali Times

728x90

27 October 2026

ಸಾಕು ನಾಯಿ ಮಾಲಕರಿಗೆ ನಗರ ಪಾಲಿಕೆ ಸೂಚನೆ : ನಿಯಮ ಪಾಲನೆ ಕಡ್ಡಾಯ

ಮಂಗಳೂರು, ಅಕ್ಟೋಬರ್ 27, 2026 (ಕರಾವಳಿ ಟೈಮ್ಸ್) : ಸರ್ವೋಚ್ಚ ನ್ಯಾಯಾಲಯವು ನೀಡಿರುವ ಆದೇಶಗಳು, ಪ್ರಾಣಿ ಜನನ ನಿಯಂತ್ರಣ ನಿಯಮಗಳು 2023, ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960, ಶ್ವಾನ ಸಂತಾನೋತ್ಪತ್ತಿ ಮತ್ತು ಮಾರಾಟ ನಿಯಮಗಳು 2017 ಹಾಗೂ ಕರ್ನಾಟಕ ಮಹಾನಗರಪಾಲಿಕೆಗಳ ಕಾಯ್ದೆಯನ್ವಯ, ಪಾಲಿಕೆ ವ್ಯಾಪ್ತಿಯ ಎಲ್ಲಾ ಸಾಕು ನಾಯಿ ಮಾಲಿಕರು ಈ ಕೆಳಗಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.

ಕಡ್ಡಾಯ ಲಸಿಕೆ : ಎಲ್ಲಾ ಸಾಕು ನಾಯಿಗಳಿಗೆ ರೇಬೀಸ್ ನಿರೋಧಕ ಲಸಿಕೆ ಹಾಗೂ ಪಶು ವೈದ್ಯರು ಸೂಚಿಸುವ ಇತರ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿ, ಪ್ರತಿ ವರ್ಷ ಬೂಸ್ಟರ್ ಡೋಸ್ ನೀಡಬೇಕು. ಪಾಲಿಕೆಯ ಅಧಿಕಾರಿಗಳು ತಪಾಸಣೆ ನಡೆಸುವ ಸಂದರ್ಭದಲ್ಲಿ ಮಾಲೀಕರು ಸಿಂಧುತ್ವ ಹೊಂದಿರುವ ಲಸಿಕಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ಆರೈಕೆ, ಸುರಕ್ಷತೆ ಮತ್ತು ಸ್ವಚ್ಛತೆ : ನಾಯಿಗೆ ಪೌಷ್ಟಿಕ ಆಹಾರ, ಶುದ್ಧ ನೀರು, ಸುರಕ್ಷಿತ ಆಶ್ರಯ ಮತ್ತು ಸೂಕ್ತ ಪಶು ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವುದು ಮಾಲಿಕರ ಕರ್ತವ್ಯವಾಗಿದೆ. ಸಾಕು ನಾಯಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಬಿಡಬಾರದು. ಹೊರಗೆ ಕರೆದೊಯ್ಯುವಾಗ ಕಡ್ಡಾಯವಾಗಿ ಬಾರು ಬಳಸಬೇಕು. ಒಂದು ವೇಳೆ ಸಾಕು ಪ್ರಾಣಿಯು ಸಾರ್ವಜನಿಕ ಸ್ಥಳದಲ್ಲಿ ಮಲವಿಸರ್ಜನೆ ಮಾಡಿದಲ್ಲಿ, ಅದರ ಮಾಲಿಕರೇ ತಕ್ಷಣ ಆ ಜಾಗವನ್ನು ಸ್ವಚ್ಛಗೊಳಿಸಬೇಕು. ತಪ್ಪಿದಲ್ಲಿ ಪಾಲಿಕೆಯ ಘನತ್ಯಾಜ್ಯ ನಿರ್ವಾಹಣಾ ಉಪನಿಯಮಗಳಡಿ 1 ಸಾವಿರದಿಂದ   5 ಸಾವಿರದವರೆಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ.

ಸಂತಾನಹರಣ ಶಸ್ತ್ರಚಿಕಿತ್ಸೆ : ಕಾನೂನುಬದ್ಧವಾಗಿ ನೋಂದಾಯಿತ ಶ್ವಾನ ಸಂತಾನೋತ್ಪತ್ತಿ ಉದ್ದೇಶಕ್ಕಾಗಿ ಬಳಸದ ಎಲ್ಲಾ ಸಾಕು ನಾಯಿಗಳಿಗೆ (ಗಂಡು ಮತ್ತು ಹೆಣ್ಣು) ಅಧಿಕೃತ ಪಶುವೈದ್ಯರ ಮೂಲಕ ಕಡ್ಡಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಬೇಕು.

ಸಂತಾನೋತ್ಪತ್ತಿದಾರರ ಕಡ್ಡಾಯ ನೋಂದಣಿ : ಶ್ವಾನಗಳ ಸಂತಾನೋತ್ಪತ್ತಿ ಅಥವಾ ಮರಿಗಳ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು, ಶ್ವಾನ ಸಂತಾನೋತ್ಪತ್ತಿ ಮತ್ತು ಮಾರಾಟ ನಿಯಮಗಳನ್ವಯ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಕಡ್ಡಾಯವಾಗಿ ನೋಂದಣಿ ಪ್ರಮಾಣ ಪತ್ರವನ್ನು ಪಡೆದಿರಬೇಕು. ಈ ನೋಂದಣಿ ಇಲ್ಲದೆ ಪಾಲಿಕೆಯಿಂದ ಯಾವುದೇ ವ್ಯಾಪಾರ ಪರವಾನಗಿ ನೀಡಲಾಗುವುದಿಲ್ಲ. ಮಾರಾಟವಾಗದ ಮರಿಗಳನ್ನು ಮಾನ್ಯತೆ ಪಡೆದ ಪ್ರಾಣಿ ಕಲ್ಯಾಣ ಸಂಸ್ಥೆಗಳ ಮೂಲಕವೇ ಪುನರ್ವಸತಿ ಕಲ್ಪಿಸಬೇಕು.

ಪ್ರಾಣಿಗಳನ್ನು ಕೈಬಿಡುವುದು ಶಿಕ್ಷಾರ್ಹ ಅಪರಾಧ : ಸಾಕು ನಾಯಿ ಅಥವಾ ಅದರ ಮರಿಗಳನ್ನು ರಸ್ತೆ, ಖಾಲಿ ನಿವೇಶನ, ಕಸದ ರಾಶಿ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ತ್ಯಜಿಸುವುದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ಈ ನಿರ್ಲಕ್ಷ್ಯದಿಂದಾಗಿ ಪ್ರಾಣಿಗೆ ಮರಣ ಅಥವಾ ಅಂಗವೈಕಲ್ಯ ಸಂಭವಿಸಿದಲ್ಲಿ, ಭಾರತೀಯ ನ್ಯಾಯ ಸಂಹಿತೆ ಅನ್ವಯ 5 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿರುತ್ತದೆ. ಅಲ್ಲದೆ, ನಾಯಿಯ ನಿರ್ಲಕ್ಷ್ಯದ ನಿರ್ವಹಣೆಯಿಂದ ಮಾನವ ಜೀವಕ್ಕೆ ಅಪಾಯ ಉಂಟಾದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಈ ಮೇಲಿನ ನಿಯಮಗಳ ಉಲ್ಲಂಘನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳನ್ನು ತ್ಯಜಿಸುವ ಪ್ರಕರಣಗಳು ಕಂಡುಬಂದಲ್ಲಿ ಮಹಾನಗರಪಾಲಿಕೆಯು ಕಾಯ್ದೆಯ ಅಡಿಯಲ್ಲಿ ಗರಿಷ್ಠ 50 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ತ್ಯಜಿಸಿದ ಪ್ರಾಣಿಗಳ ಪೋಷಣೆ ಮತ್ತು ಆರೈಕೆಯ ಸಂಪೂರ್ಣ ವೆಚ್ಚವನ್ನು ಮಾಲಿಕರಿಂದಲೇ ಕಾನೂನುಬದ್ಧವಾಗಿ ವಸೂಲಿ ಮಾಡಲಾಗುತ್ತದೆ ಹಾಗೂ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸಂಬಂಧಪಟ್ಟ ಪೆÇಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ದಾಖಲಿಸಲಾಗುತ್ತದೆ.

ಯಾರಾದರೂ ಸಾಕು ನಾಯಿಗಳನ್ನು ಅಥವಾ ಅವುಗಳ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಂದು ತ್ಯಜಿಸುತ್ತಿರುವುದು ಕಂಡುಬಂದಲ್ಲಿ, ಸಾರ್ವಜನಿಕರು ಫೋಟೋ ಅಥವಾ ವಿಡಿಯೋ ಸಾಕ್ಷ್ಯದೊಂದಿಗೆ ಪಾಲಿಕೆಯ ಸಹಾಯವಾಣಿ ಸಂಖ್ಯೆ 9449007722ಗೆ ಮಾಹಿತಿ ನೀಡಬಹುದು (ಸಾರ್ವಜನಿಕ ದೂರುಗಳಿಗಾಗಿ ರಾಜ್ಯದ ಸಹಾಯವಾಣಿ ಸಂಖ್ಯೆ 1902ನ್ನು ಸಹ ಬಳಸಬಹುದು) ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸಾಕು ನಾಯಿ ಮಾಲಕರಿಗೆ ನಗರ ಪಾಲಿಕೆ ಸೂಚನೆ : ನಿಯಮ ಪಾಲನೆ ಕಡ್ಡಾಯ Rating: 5 Reviewed By: karavali Times
Scroll to Top