ಮಂಗಳೂರು, ಅಕ್ಟೋಬರ್ 27, 2026 (ಕರಾವಳಿ ಟೈಮ್ಸ್) : ಮ.ನ.ಪಾ ವ್ಯಾಪ್ತಿಯ ಕದ್ರಿ ಶಿವಭಾಗ್ ವಾರ್ಡಿನ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಅದರ ದುರಸ್ತಿಗೆ ಬಿಡಿಗಾಸು ಅನುದಾನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪಾಲಿಕೆಯ ವಿರುದ್ಧ ಕದ್ರಿ ಶಿವಭಾಗ್ ವಾರ್ಡಿನ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಸಂಪೂರ್ಣ ಹದಗೆಟ್ಟಿರುವ ಈ ರಸ್ತೆಯ ಅಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-1ರಲ್ಲೇ ಅಗತ್ಯ ಅನುದಾನ ಮೀಸಲಿಟ್ಟಿದ್ದೆವು. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅದನ್ನು ತಡೆಹಿಡಿದ ಪರಿಣಾಮ ರಸ್ತೆ ದುರಸ್ತಿಗೊಳ್ಳದೇ ಸ್ಥಳೀಯರು ದಿನನಿತ್ಯ ಸಂಕಷ್ಟ ಎದುರಿಸುವಂತಾಗಿದೆ. ಈಗಾಗಲೇ ಸಂಬಂಧ ಪಟ್ಟ ಎಲ್ಲರಲ್ಲೂ ಈ ಕುರಿತು ಮನವಿ ಮಾಡಿದರೂ ಅಧಿಕಾರದಲ್ಲಿರುವವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಜನರ ನ್ಯಾಯಯುತ ಬೇಡಿಕೆಗೆ ಸದಾ ನನ್ನ ಸಹಮತವಿದ್ದು, ಅವರ ಪರವಾಗಿ ಮುಂದಿನ ದಿನಗಳಲ್ಲಿ ರಸ್ತೆ ಗುಂಡಿಗಳಿರುವ ಎಲ್ಲಾ ವಾರ್ಡ್ ಗಳಲ್ಲಿ ಅಲ್ಲಿನ ಬಿಜೆಪಿ ವತಿಯಿಂದಲೇ ಪ್ರತಿಭಟನೆ ನಡೆಸಿ ಸಂಬಂಧಪಟ್ಟವರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದರು.
ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಮುಗಿದು ಎರಡು ವರ್ಷವಾಗುತ್ತಿದ್ದು, ನಿಕಟಪೂರ್ವ ಪಾಲಿಕೆ ಸದಸ್ಯರ ಕರೆಗಳನ್ನೇ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ. ಹೀಗಾದರೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹೇಗೆ? ಎಂದು ತರಾಟೆಗೆ ತೆಗೆದುಕೊಂಡರು.
ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ನಿಕಟಪೂರ್ವ ಪಾಲಿಕೆ ಸದಸ್ಯರಾದ ಕಾವ್ಯ ನಟರಾಜ್ ಆಳ್ವ, ಮನೋಹರ್ ಶೆಟ್ಟಿ ಕದ್ರಿ, ಶಕೀಲಾ ಖಾವ, ಪ್ರಮುಖರಾದ ವಿಕ್ರಮ್ ಚೌಟ, ಜಯಕುಮಾರ್, ರವಿಚಂದ್ರ, ಪ್ರವೀಣ್ ನಿಡ್ಡೇಲ್, ರಾಮಚಂದ್ರ ಚೌಟ, ಅಶ್ವಿತ್ ಕೊಟ್ಟಾರಿ, ಕಿರಣ್ ದೇವಾಡಿಗ, ರಾಮ್ ಪ್ರಸಾದ್, ನವೀನ್ ಶೆಣೈ, ದೀಪಕ್ ಡಿಸೋಜ, ಟೀನಾ, ಜೆಸೆಲ್, ಕಮಲಾಕ್ಷಿ, ಚರಣ್ ಶೆಟ್ಟಿ, ಪ್ರಶಾಂತ್ ಆಳ್ವ, ವೆಂಕಟೇಶ್, ವರುಣ್ ಅಂಬಟ್, ಋತ್ವಿಕ್ ಕದ್ರಿ, ಆಲ್ವಿನ್, ವಿಜಯ್ ಭಂಡಾರಿ, ಗೋಪಾಲ್, ಯೋಗೀಶ್ ಶೆಣೈ, ಅರ್ಚನಾ ಆಳ್ವ, ಭಾಸ್ಕರ್ ಚಂದ್ರ ಶೆಟ್ಟಿ, ಮಹಾಬಲ ಕುಲಾಲ್, ಪ್ರಶಾಂತ್ ಕಂಕನಾಡಿ, ನಟರಾಜ್ ಆಳ್ವ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.












0 comments:
Post a Comment