ಮಂಗಳೂರು, ಅಕ್ಟೋಬರ್ 23, 2026 (ಕರಾವಳಿ ಟೈಮ್ಸ್) : ಶಾಲಾ ಬಸ್ಸಿಗೆ ಖಾಸಗಿ ಟೂರಿಸ್ಟ್ ಬಸ್ಸು ಡಿಕ್ಕಿ ಹೊಡದು 13 ವಿದ್ಯಾರ್ಥಿಗಳು ಹಾಗೂ ಶಾಲಾ ಬಸ್ಸು ಚಾಲಕ ಗಾಯಗೊಂಡ ಘಟನೆ ಮುಲ್ಕಿ-ಕೊಲ್ನಾಡು ಸಂದರರಾಮ್ ಶೆಟ್ಟಿ ಸಭಾಂಗಣದ ಬಳಿ ಅ 23 ರಂದು ಅಪರಾಹ್ನ ವೇಳೆ ಸಂಭವಿಸಿದೆ.
ಅ 23 ರಂದು ಸಂಜೆ ಸುಮಾರು 3.40 ರ ವೇಳೆಗೆ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ಕೆಎ01 ಎಆರ್ 1655 ನೋಂದಣಿ ಸಂಖ್ಯೆಯ ಎಸ್.ಆರ್.ಎಸ್. ಟೂರಿಸ್ಟ್ ಬೆಂಗಳೂರಿಗೆ ಸೇರಿದ ಮಿನಿ ಬಸ್ಸನ್ನು ಅದರ ಚಾಲಕ ದೇವರಾಜ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ಮಂಗಳೂರು ನಗರದ ಮುಲ್ಕಿ ಕೊಲ್ನಾಡು ಸುಂದರರಾಮ್ ಶೆಟ್ಟಿ ಸಭಾಂಗಣದ ಬಳಿ ನಿಂತಿದ್ದ ರ್ಯಾನ್ ಇಂಟರ್ ನ್ಯಾಷನಲ್ ಸ್ಕೂಲಿನ ಶಾಲಾ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ಪರಿಣಾಮ ಶಾಲಾ ಬಸ್ಸು ಸಮೀಪದ ಚರಂಡಿಗೆ ಬಿದ್ದಿದ್ದು, ಶಾಲಾ ಬಸ್ಸಿನಲ್ಲಿದ್ದ 13 ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಬಸ್ಸಿನ ಚಾಲಕ ದೇವದಾಸ್ ಎಂಬವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮುಕ್ಕದ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.











0 comments:
Post a Comment