ಮುಲ್ಕಿ, ಅಕ್ಟೋಬರ್ 21, 2026 (ಕರಾವಳಿ ಟೈಮ್ಸ್) : ಮಗಳ ಮನೆಯಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಹಠಾತ್ ಹೃದಯಾಘಾತಕ್ಕೊಳಗಾದ ಮುಲ್ಕಿ-ಅಂಗರಗುಡ್ಡೆ ನಿವಾಸಿ, ಅಟೋ ರಿಕ್ಷಾ ಚಾಲಕ ಅಬ್ದುಲ್ ರಹಿಮಾನ್ (52) ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಅಕ್ಟೋಬರ್ 18 ರಂದು ಭಾನುವಾರ ಮಧ್ಯರಾತ್ರಿ ವೇಳೆ ಸಂಭವಿಸಿದೆ.
ಇವರು ಕಿನ್ನಿಗೋಳಿ ಸಮೀಪದ ಎಸ್. ಕೋಡಿ ಅಟೋ ಪಾರ್ಕಿನಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಈ ಹಿಂದೆ ಬಸ್ ನಿರ್ವಾಹಕರಾಗಿಯೂ ಕೆಲಸ ಮಾಡಿಕೊಂಡಿದ್ದ ಇವರು ಸ್ಥಳೀಯವಾಗಿ ರಿಕ್ಷಾ ರಹೀಂ ಎಂದೇ ಚಿರಪರಿಚಿತರಾಗಿದ್ದರು. ಇವರು ಯಾವುದೇ ಜಾತಿ-ಧರ್ಮ ಬೇಧವಿಲ್ಲದೆ ಯಾವುದೇ ಮಧ್ಯ ರಾತ್ರಿ ಕರೆದರೂ ಅಟೋ ರಿಕ್ಷಾದೊಂದಿಗೆ ಸಹಾಯಕ್ಕೆ ಧಾವಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಮಗಳ ನಾದಿನಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಇವರಿಗೆ ಹಠಾತ್ ಹೃದಯ ಬೇನೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತದೇಹವನ್ನು ಅ 19 ರಂದು ಸೋಮವಾರ ಮುಂಜಾನೆ ವೇಳೆ ಅವರ ಅಂಗರಗುಡ್ಡೆ ಮನೆಗೆ ತರಲಾಗಿದ್ದು, ಮಧ್ಯಾಹ್ನದ ವೇಳೆಗೆ ಸ್ಥಳೀಯ ಮಸೀದಿಯಲ್ಲಿ ದಫನ ಕಾರ್ಯ ನೆರವೇರಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.













0 comments:
Post a Comment