ಮಂಗಳೂರು, ನವಂಬರ್ 04, 2026 (ಕರಾವಳಿ ಟೈಮ್ಸ್) : ಎಸ್‍ಐಆರ್ ಕುರಿತು ಸುಳ್ಳು ಮಾಹಿತಿ ನೀಡಿ ದೇಶಾದ್ಯಂತ ಅರಾಜಕತೆ ಸೃಷ್ಟಿಸಲು ನೋಡುತ್ತಿರುವ ಕಾಂಗ್ರೆಸ್ಸಿನ ಷಡ್ಯಂತ್ರದ ವಿರುದ್ಧ, ಯುವ ಸಮುದಾಯಕ್ಕೆ ಹಾಗೂ ಜನರಿಗೆ ಸರಿಯಾದ ಮಾಹಿತಿ ನೀಡಿ ದೇಶ ವಿರೋಧಿಗಳ ಸಂಚನ್ನು ಬಯಲು ಮಾಡುವ ಉದ್ದೇಶದಿಂದ ನವೆಂಬರ್ 6 ರಂದು ಶುಕ್ರವಾರ ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಭಾಗ ಮಟ್ಟದ ‘ಪ್ರಜಾಪ್ರಭುತ್ವ ಉಳಿಸಿ-ಅರಾಜಕತೆ ಅಳಿಸಿ’ ಎಂಬ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ಅಭಿಯಾನ ನಡೆಯಲಿದೆ. ಮಂಗಳೂರು ಹಾಗೂ ಉಡುಪಿ ಜಿಲ್ಲೆಯಿಂದ ಒಟ್ಟು ಇಪ್ಪತ್ತು ಸಾವಿರಕ್ಕೂ ಜನ ಆಗಮಿಸಲಿದ್ದು, ಮಂಗಳೂರು ನಗರ ದಕ್ಷಿಣದಿಂದಲೇ ಐದು ಸಾವಿರ ಜನ ಬರಲಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ನಗರದ ಕಚೇರಿಯಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅಂದು ಅಪರಾಹ್ನ 3 ಗಂಟೆಗೆ ಕ್ಲಾಕ್ ಟವರ್ ಬಳಿಯ ಮಿನಿ ವಿಧಾನ ಸೌಧದಿಂದ ಕುಣಿತ ಭಜನೆ, ನಾಸಿಕ್ ಬ್ಯಾಂಡ್, ಚಂಡೆಯೊಂದಿಗೆ ಇಪ್ಪತ್ತು ಸಾವಿರಕ್ಕೂ ಅಧಿಕ ಜನ ಬೃಹತ್ ಪಾದಯಾತ್ರೆಯಲ್ಲಿ ಸಾಗಿ, ಕದ್ರಿ ಮೈದಾನಕ್ಕೆ ತಲುಪಿ ಅಲ್ಲಿಯೇ ಸಾರ್ವಜನಿಕ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವರು ಮತ್ತು ಖ್ಯಾತ ಮಲಯಾಳಂ ಚಿತ್ರನಟ ಸುರೇಶ್ ಗೋಪಿ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಉಪಸ್ಥಿತರಿರಲಿದ್ದಾರೆ. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಇರುವ ಈ ಅಭಿಯಾನದಲ್ಲಿ ವಿವಿಧ ಕ್ಷೇತ್ರಗಳ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಯುವ ಜನರನ್ನು ಕಣ್ಮುಂದೆ ಇಟ್ಟುಕೊಂಡು ಅನೇಕ ಯೋಜನೆಗಳನ್ನು ಮಾಡಿದ್ದಾರೆ. 7 ಐಐಟಿಗಳ ಸ್ಥಾಪನೆ, 8 ಕಡೆ ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಪ್ರಾರಂಭಿಸಲಾಗಿದೆ. 2014ಕ್ಕೆ ಮೊದಲು ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. 12 ವರ್ಷಗಳಲ್ಲಿ 431 ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗಿದೆ. ಮೋದಿಯವರು ಕೌಶಲ್ಯಾಭಿವೃದ್ಧಿಯ ಹೊಸ ಸಚಿವಾಲಯ ಪ್ರಾರಂಭಿಸಿದ್ದಾರೆ. ಸ್ಟಾರ್ಟಪ್ ಸಂಖ್ಯೆಗಳೂ ಹೆಚ್ಚಾಗಿವೆ. 2,12,283 ಸ್ಟಾರ್ಟಪ್‍ಗಳು ಆರಂಭವಾಗಿವೆ. ಈ ಪೈಕಿ 21,601 ಕರ್ನಾಟಕದಲ್ಲೇ ಆರಂಭಗೊಂಡಿವೆ. ಕ್ರೀಡಾ ಕ್ಷೇತ್ರದಲ್ಲಿ ಯುವಜನರಿಗಾಗಿ ಹೊಸ ಯೋಜನೆಗಳನ್ನು ನೀಡಿದ್ದಾರೆ ಎಂದ ಕಾಮತ್, ಕಾಂಗ್ರೆಸ್ ಯುವಜನರನ್ನು ಸಂಘರ್ಷಕ್ಕೆ ಇಳಿಸುವ ಹಾಗೂ ತಪ್ಪು ದಾರಿಗೆ ಎಳೆಯುವ ಯತ್ನ ಮಾಡುತ್ತಿದೆ. ಯುವಕರನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಸಂಘರ್ಷಕ್ಕೆ ಇಳಿಸುವುದು ಸರಿಯಲ್ಲವೆಂದು ಸುಪ್ರೀಂ ಕೋರ್ಟ್ ಕೂಡಾ ಹೇಳಿದೆ. ಈಗ ಎಸ್‍ಐಆರ್ ಸರಿ ಇಲ್ಲವೆಂದು ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಇತಿಹಾಸ ಮರೆತು ಹೋಗಿರಬಹುದು. ಈ ದೇಶದಲ್ಲಿ 12 ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದ್ದು, 10 ಬಾರಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೇ ಆಗಿದೆ. ಈಗ ಪ್ರಜಾಪ್ರಭುತ್ವದ ಮುಖವಾಡ ಧರಿಸಿರುವ ಕಾಂಗ್ರೆಸ್ ಪಕ್ಷವು ವ್ಯವಸ್ಥೆಯನ್ನು ಬುಡಮೇಲು ಮಾಡಲು ನಿರಂತರವಾಗಿ ಕುತಂತ್ರ ನಡೆಸುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಡೀ ವಿಶ್ವವೇ ಭಾರತವನ್ನು ಗೌರವದಿಂದ ನೋಡುತ್ತಿರುವ ಸಂದರ್ಭದಲ್ಲಿ, ದೇಶದ ಒಗ್ಗಟ್ಟನ್ನು ಒಡೆಯಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಹವಣಿಸುತ್ತಿವೆ. ಇಂತಹ ದೇಶದ್ರೋಹಿ ಷಡ್ಯಂತ್ರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಬಿಜೆಪಿ ರಾಜ್ಯಾದ್ಯಂತ ಈ ಆಂದೋಲನವನ್ನು ಆರಂಭಿಸಿದೆ. “ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‍ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದನ್ನು ಜೀರ್ಣಿಸಿಕೊಳ್ಳಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಮೋದಿಯವರ ಜಾಗತಿಕ ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್, ವಿದೇಶಿ ಶಕ್ತಿಗಳ ಜೊತೆಗೂಡಿ ದೇಶದಲ್ಲಿ ಆಂತರಿಕ ಅಶಾಂತಿ ಮತ್ತು ಅರಾಜಕತೆ ಸೃಷ್ಟಿಸಲು ನಿರಂತರವಾಗಿ ಹುನ್ನಾರ ನಡೆಸುತ್ತಿದೆ ಎಂದ ಅವರು, ಕರ್ನಾಟಕದಲ್ಲಿ ಇಂದು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದಂತಾಗಿದೆ. ಖಜಾನೆ ಖಾಲಿಯಾಗಿದ್ದು, ಜನಸಾಮಾನ್ಯರ ಮೇಲೆ ನಿರಂತರವಾಗಿ ತೆರಿಗೆ ಮತ್ತು ಬೆಲೆ ಏರಿಕೆಯ ಬರೆ ಎಳೆಯಲಾಗುತ್ತಿದೆ. ಬರಿದಾಗಿರುವ ತನ್ನ ಖಜಾನೆ ತುಂಬಿಸಿಕೊಳ್ಳಲು ಈಗ ಕಾಂಗ್ರೆಸ್ ಜನರಿಂದಲೇ ಸುಲಿಗೆ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಈಗಾಗಲೇ ನೆರೆಹೊರೆಯ ದೇಶಗಳಲ್ಲಿ ಆಗಿರುವಂತಹ ದಂಗೆಗಳನ್ನು ಭಾರತದಲ್ಲೂ ನಡೆಸಿ ಸ್ಥಿರ ಆಡಳಿತವನ್ನು ಅಸ್ಥಿರಗೊಳಿಸಲು ಪಿತೂರಿ ನಡೆಸಲಾಗುತ್ತಿದೆ. ಆದರೆ ಭಾರತವನ್ನು ಬಾಂಗ್ಲಾ, ಶ್ರೀಲಂಕಾ, ಫ್ರಾನ್ಸ್ ಮಾಡಲು, ಇಲ್ಲಿ ಅರಾಜಕತೆ ಸೃಷ್ಟಿಸಲು ಯಾವ ಶಕ್ತಿಯಿಂದಲೂ ಅಸಾಧ್ಯ ಎಂದ ಶಾಸಕ ಕಾಮತ್, ಸಂವಿಧಾನದ ಪ್ರತಿ ಹಿಡಿದು ತಿರುಗುವ ಕಾಂಗ್ರೆಸ್ಸಿಗರಿಗೆ ದೇಶದ ಸಂವಿಧಾನ, ನ್ಯಾಯಾಂಗ ಮತ್ತು ಸಾಂವಿಧಾ£ಕ ಸಂಸ್ಥೆಗಳ ಮೇಲೆ ಕಿಂಚಿತ್ತೂ ನಂಬಿಕೆಯಿಲ್ಲ. ದೇಶದ ಜನತೆ ನೀಡಿರುವ ತೀರ್ಪಿನ ಮೇಲೆ ನಂಬಿಕೆ ಇಲ್ಲ, ಇವಿಎಂ ಮೇಲೆ ನಂಬಿಕೆಯಿಲ್ಲ, ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ, ಸುಪ್ರೀಂ ಕೋರ್ಟ್ ತೀರ್ಪುಗಳ ಮೇಲೆಯೂ ನಂಬಿಕೆಯಿಲ್ಲ. ಇಂತಹ ದೇಶವಿರೋಧಿ ಶಕ್ತಿಗಳ ವಿರುದ್ಧ ಜನಜಾಗೃತಿ ಮೂಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದವರು ಹೇಳಿದರು.
ಈ ಸಂದರ್ಭ ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಎಂ, ಮಂಡಲದ ಯುವ ಮೋರ್ಚಾ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಪ್ರಮುಖರಾದ ವಿನೋದ್ ಮೆಂಡನ್, ಸುರೇಖಾ ಹೆಗ್ಡೆ, ಸುಕೇಶ್ ಅಳಪೆ, ಪ್ರವೀಣ್ ನಿಡ್ಡೇಲ್ ಜೊತೆಗಿದ್ದರು.













0 comments:
Post a Comment