ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಕಾರು ಚಾಲಕರಿಂದ ದುಬಾರಿ ಮೊತ್ತ ವಸೂಲಾತಿ : ಐವನ್ ಡಿಸೋಜ ತೀವ್ರ ವಿರೋಧ, ಅಧಿಕಾರಿಗಳಿಂದ ಸೂಕ್ತ ಕ್ರಮದ ಭರವಸೆ - Karavali Times ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಕಾರು ಚಾಲಕರಿಂದ ದುಬಾರಿ ಮೊತ್ತ ವಸೂಲಾತಿ : ಐವನ್ ಡಿಸೋಜ ತೀವ್ರ ವಿರೋಧ, ಅಧಿಕಾರಿಗಳಿಂದ ಸೂಕ್ತ ಕ್ರಮದ ಭರವಸೆ - Karavali Times

728x90

1 November 2026

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಕಾರು ಚಾಲಕರಿಂದ ದುಬಾರಿ ಮೊತ್ತ ವಸೂಲಾತಿ : ಐವನ್ ಡಿಸೋಜ ತೀವ್ರ ವಿರೋಧ, ಅಧಿಕಾರಿಗಳಿಂದ ಸೂಕ್ತ ಕ್ರಮದ ಭರವಸೆ

ಮಂಗಳೂರು, ನವಂಬರ್ 01, 2026 (ಕರಾವಳಿ ಟೈಮ್ಸ್) : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಕಾರು ಚಾಲಕರು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅಥವಾ ಬಿಡಲು ವಿಮಾನ ನಿಲ್ದಾಣದ ಒಳಗಡೆ ಪ್ರವೇಶಿಸಿ ಹಿಂದಿರುಗುವ ಸಂದರ್ಭದಲ್ಲಿ 50 ರೂಪಾಯಿ ಶುಲ್ಕ ವಸೂಲಿ ಮಾಡುತ್ತಿರುವ ಕ್ರಮವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ತೀವ್ರವಾಗಿ ವಿರೋಧಿಸಿದ್ದಾರೆ.

ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ವಾಹನಗಳಿಗೆ ಇಲ್ಲದ ಈ ಶುಲ್ಕವನ್ನು ಕೇವಲ ಪ್ರವಾಸಿ ಕಾರು ಚಾಲಕರಿಂದ ಮಾತ್ರ ವಸೂಲಿ ಮಾಡುತ್ತಿರುವುದು ತಾರತಮ್ಯದಿಂದ ಕೂಡಿದ ಹಾಗೂ ಅಸಮಂಜಸ ಕ್ರಮವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂತಹ ಶುಲ್ಕದ ವ್ಯವಸ್ಥೆ ಇಲ್ಲದಿರುವಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತ್ರ ಈ ರೀತಿಯ ನಿಯಮ ಜಾರಿಗೊಳಿಸಿರುವುದೇಕೆ ಎಂದು ಪ್ರಶ್ನಿಸಿದರು.

ಪ್ರತಿಬಾರಿ 50 ರೂಪಾಯಿ ಶುಲ್ಕ ವಸೂಲಿ ಮಾಡುವುದು ಕಾರು ಚಾಲಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಹಾಕಿದಂತಾಗಿದೆ. ಇದೊಂದು ರೀತಿಯಲ್ಲಿ ಚಾಲಕರ ಜೇಬಿಗೆ ಕತ್ತರಿ ಹಾಕುವ ಕ್ರಮವಾಗಿದೆ. ಆದ್ದರಿಂದ ಈ ಶುಲ್ಕವನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಕಾರು ಚಾಲಕರೊಂದಿಗೆ ಸೇರಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಅದಾನಿ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಅಳ್ವ ಮಾತನಾಡಿ, ಈ ಸಮಸ್ಯೆಯನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸ್ಥಳೀಯ ಪ್ರವಾಸಿ ಕಾರು ಚಾಲಕರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಆಡಳಿತದ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಅದೇ ರೀತಿ, ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿನ್ನು ವರ್ಗೀಸ್ ಅವರು ಕಾರು ಚಾಲಕರು ವಿಮಾನ ನಿಲ್ದಾಣದ ಆಡಳಿತದೊಂದಿಗೆ ಸಹಕರಿಸಿದಲ್ಲಿ ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದಲ್ಲದೆ, ವಿಮಾನ ನಿಲ್ದಾಣದೊಳಗೆ 30 ನಿಮಿಷಗಳಿಗಿಂತ ಹೆಚ್ಚು ಸಮಯವಾದಲ್ಲಿ 300 ರೂಪಾಯಿ ಶುಲ್ಕ ವಿಧಿಸುತ್ತಿರುವುದಕ್ಕೂ ಚಾಲಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೆಲವೊಮ್ಮೆ ಅನಿವಾರ್ಯವಾಗಿ ಉಂಟಾಗುವ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ನಿಂದಾಗಿ ನಿಗದಿತ ಸಮಯದೊಳಗೆ ಹೊರಬರಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿಯೂ 300 ರೂಪಾಯಿ ಶುಲ್ಕ ವಿಧಿಸುವುದು ಚಾಲಕರಿಗೆ ಆರ್ಥಿಕವಾಗಿ ದುಬಾರಿಯಾಗುತ್ತದೆ. ಆದ್ದರಿಂದ ಈ ನಿಯಮವನ್ನೂ ಮರುಪರಿಶೀಲಿಸಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ವಿಮಾನ ನಿಲ್ದಾಣದ ಮಾನವ ಸಂಪನ್ಮೂಲ ವಿಭಾಗದ (ಎಚ್ ಆರ್) ರವಿ ಅವರು ಒಂದು ವಾರದೊಳಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅಂತಿಮವಾಗಿ,ಕಿಶೋರ್ ಅಳ್ವ ಅವರ ಭರವಸೆ ಹಾಗೂ ಐವನ್ ಡಿಸೋಜಾ ಅವರ ನೇತೃತ್ವದಲ್ಲಿ ಪ್ರವಾಸಿ ಕಾರು ಚಾಲಕರ ಸಮಸ್ಯೆಗಳನ್ನು ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಇಒ ಬಿನ್ನು ವರ್ಗೀಸ್, ಮಾನವ ಸಂಪನ್ಮೂಲ ವಿಭಾಗದ (ಎಚ್ ಆರ್) ರವಿ ಹಾಗೂ ಮಂಗಳೂರು ಟೂರಿಸ್ಟ್ ಡ್ರೈವರ್ಸ್ ಅಸೋಸಿಯೇಷನ್ ಇದರ ಹರಿಶ್ಚಂದ್ರ, ಶುಭಕರ ಶೆಟ್ಟಿ, ಅಬೆಲ್ ಡಿಸೋಜ, ರಮೇಶ್, ರೋಷನ್, ದಿನೇಶ್ ಕಂಕನಾಡಿ, ಸತೀಶ್, ದಯಾನಂದ ಸಾಲಿಯಾನ್ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಕಾರು ಚಾಲಕರಿಂದ ದುಬಾರಿ ಮೊತ್ತ ವಸೂಲಾತಿ : ಐವನ್ ಡಿಸೋಜ ತೀವ್ರ ವಿರೋಧ, ಅಧಿಕಾರಿಗಳಿಂದ ಸೂಕ್ತ ಕ್ರಮದ ಭರವಸೆ Rating: 5 Reviewed By: karavali Times
Scroll to Top