ಬಂಟ್ವಾಳ, ನವಂಬರ್ 02, 2026 (ಕರಾವಳಿ ಟೈಮ್ಸ್) : ಸಜಿಪನಡು ಪಂಚಾಯತ್ ನಿರ್ಲಕ್ಷ್ಯ ಖಂಡಿಸಿ ಇಲ್ಲಿನ ನಾಗರಿಕ ಹಿತ ರಕ್ಷಣಾ ವೇದಿಕೆ ವತಿಯಿಂದ ನ 2 ರಂದು ದಿಢೀರ್ ಪ್ರತಿಭಟನೆ ನಡೆಸಲಾಯಿತು.
ಅಬೂಬಕ್ಕರ್ ಸಜಿಪ ಅವರ ನೇತೃತ್ವದಲ್ಲಿ ಇಲ್ಲಿನ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಈ ಪ್ರತಿಭಟನೆ ನಡೆದಿದ್ದು, ಸಜಿಪನಡು ಪಂಚಾಯತ್ ನಿರ್ಲಕ್ಷತನ ಖಂಡಿಸಿ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ. ನಾಗರಿಕ ಹಿತ ರಕ್ಷಣಾ ವೇದಿಕೆಯು ಸಾರ್ವಜನಿಕ ಹಿತಾಸಕ್ತಿಯ ಹಲವು ಮನವಿಗಳನ್ನು ಸಲ್ಲಿಸಿದ್ದು, ಆದರೆ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಯಾವುದೇ ಕನಿಷ್ಠ ಸ್ಪಂದನೆಯನ್ನೂ ತೋರಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಸಜಿಪನಡು ಗ್ರಾಮದ ಸಜಿಪನಡು ಶಾಲಾ ವಠಾರದ ಕಾಂಪೌಂಡಿಗೆ ತಾಗಿಕೊಂಡು ಸ್ಥಳೀಯ ನಿವಾಸಿ ಶಿವರಾಮ ಜೋಶಿ ಎಂಬವರು ವಿದ್ಯುತ್ ಬೇಲಿಯನ್ನು ಅಳವಡಿಸಿದ್ದು ಪರಿಣಾಮವಾಗಿ 2-3 ಜನರಿಗೆ ವಿದ್ಯುತ್ ಅಪಘಾತವಾಗಿರುತ್ತದೆ. ಈ ಬಗ್ಗೆ ಸಜಿಪನಡು ಗ್ರಾಮ ಪಂಚಾಯತಿಗೆ ತಿಂಗಳ ಹಿಂದೆ ಲಿಖಿತವಾಗಿ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಆಗಿಲ್ಲ. ಈ ಕಾರಣ್ಕಾಗಿ ಸ್ಥಳೀಯರು ದಿಢೀರ್ ಆಗಿ ಈ ಪ್ರತಿಭಟನೆಗಿಳಿದಿದ್ದಾರೆ.
ಬಳಿಕ ಸ್ಥಳಕ್ಕಾಗಮಿಸಿದ ತಾ ಪಂ ಇಒ, ಪೊಲೀಸ್ ಅಧಿಕಾರಿಗಳು ಹಾಗೂ ಮೆಸ್ಕಾಂ ಇಲಾಖಾಧಿಕಾರಿಗಳು ಶೀಘ್ರ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಯಿತು.
ಸ್ಥಳೀಯರಾದ ಎಸ್ ಅಬೂಬಕರ್ ಸಜಿಪ, ಹನೀಫ್ ಗೋಳಿಪಡ್ಪು, ಹನೀಫ್ ಸಜಿಪ, ಲತೀಫ್ ಬೋಳಮೆ, ರಹೀಂ ಬೋಳಮೆ, ಫತ್ತಾಹ್ ಪದವು, ಯಾಕೂಬ್ ಸಜಿಪ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.











0 comments:
Post a Comment