ಮಂಗಳೂರು, ನವಂಬರ್ 23, 2026 (ಕರಾವಳಿ ಟೈಮ್ಸ್) : ಕೆಲವೊಂದು ಕೋಮು ಸೂಕ್ಷ್ಮ ಕಾರಣಗಳಿಗಾಗಿ ಕಳೆದ ಒಂದೆರಡು ವರ್ಷಗಳಿಂದ ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ರಾತ್ರಿ ವ್ಯಾಪಾರ ಸಮಯವನ್ನು ರಾತ್ರಿ 10.30ಕ್ಕೆ ನಿಗದಿಪಡಿಸಿ ಪೊಲೀಸ್ ಇಲಾಖೆ ನಿಗದಿಪಡಿಸಿ ಮಂಗಳೂರು ನಗರದ ಶಾಂತಿ-ಸುವ್ಯವಸ್ಥೆ ಮರಳಿ ತರಲು ಕ್ರಮ ಕೈಗೊಂಡಿತ್ತು.
ಇದೀಗ ಮಂಗಳೂರು ನಗರದ ಕಾನೂನು ಸುವ್ಯವಸ್ಥೆ ಸುಧಾರಿಸಿರುವ ಹಿನ್ನಲೆಯಲ್ಲಿ ರಾತ್ರಿ ವ್ಯಾಪಾರದ ಸಮಯದ ಮಿತಿ ಸಡಿಲಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದು, ರಾತ್ರಿ 11.45ರ ವರೆಗೆ ಅಂಗಡಿ-ಹೋಟೆಲುಗಳನ್ನು ತೆರೆಯಲು ಆವಕಾಶ ನೀಡಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಗತ್ಯತೆ, ಮಾದಕ ವಸ್ತುಗಳ ಹಾಗೂ ಅಪರಾಧ ಚಟುವಟಿಕೆಗಳ ನಿಯಂತ್ರಣ, ರಾತ್ರಿ ವೇಳೆಯಲ್ಲಿ ನಡೆಯುವ ಅನಧಿಕೃತ ಚಟುವಟಿಕೆಗಳು, ಹೋಟೆಲ್‍ಗಳು ಮತ್ತು ಇತರೆ ವ್ಯಾಪಾರ ಕೇಂದ್ರಗಳ ಸುತ್ತಮುತ್ತ ನಡೆಯುವ ಅನುಮಾನಾಸ್ಪದ ಚಟುವಟಿಕೆಗಳು ಹಾಗೂ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಉಂಟಾಗುವ ತೊಂದರೆಗಳನ್ನು ತಪ್ಪಿಸುವ ಹಿನ್ನಲೆಯಲ್ಲಿ ಈ ಹಿಂದೆ ರಾತ್ರಿ 10.30ರೊಳಗೆ ಅಂಗಡಿ-ಹೋಟೆಲುಗಳನ್ನು ಮುಚ್ಚಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು.
ಇದೀಗ ನಗರದ ಕಾನೂನು ಸುವ್ಯವಸ್ಥೆ ಸುಧಾರಿಸಿರುವ ಹಿನ್ನಲೆಯಲ್ಲಿ ಈ ಆದೇಶವನ್ನು ಮರುಪರಿಶೀಲಿಸಿದ ಪೊಲೀಸ್ ಇಲಾಖೆ ಮಂಗಳೂರು ನಗರ ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ವ್ಯಾಪಾರ ಕೇಂದ್ರಗಳು, ಅಂಗಡಿಗಳು, ಹೋಟೆಲುಗಳು, ರೆಸ್ಟೋರೆಂಟ್ ಗಳು, ಟೀ ಸ್ಟಾಲ್ ಗಳು, ಪಾನ್ ಅಂಗಡಿಗಳು ಹಾಗೂ ಇತರೆ ವ್ಯಾಪಾರ ಚಟುವಟಿಕೆಗಳನ್ನು ರಾತ್ರಿ 11.45ರ ವರೆಗೆ ನಡೆಸಲು ಅನುಮತಿಸಿ ಆದೇಶ ಹೊರಡಿಸಲಾಗಿದೆ. ರಾತ್ರಿ 11.45 ರಿಂದ ಬೆಳಿಗ್ಗೆ 5.30ರವರೆಗೆ ಯಾವುದೇ ಚಟುವಟಿಕೆ ನಡೆಸದಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಆದೇಶಿಸಿದ್ದು, ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದವರು ಎಚ್ಚರಿಸಿದ್ದಾರೆ.














0 comments:
Post a Comment