ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎಐ ತಂತ್ರಜ್ಞಾನದ ಬಲ, ತುರ್ತು ಚಿಕಿತ್ಸೆಗೆ 2.50 ಲಕ್ಷದವರೆಗೆ ನೆರವು, 100 ಹೊಸ ಅಂಬ್ಯುಲೆನ್ಸ್ ಗಳ ಸೇರ್ಪಡೆ : ಡಾ ಶಾಲಿನಿ ರಜನೀಶ್ - Karavali Times ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎಐ ತಂತ್ರಜ್ಞಾನದ ಬಲ, ತುರ್ತು ಚಿಕಿತ್ಸೆಗೆ 2.50 ಲಕ್ಷದವರೆಗೆ ನೆರವು, 100 ಹೊಸ ಅಂಬ್ಯುಲೆನ್ಸ್ ಗಳ ಸೇರ್ಪಡೆ : ಡಾ ಶಾಲಿನಿ ರಜನೀಶ್ - Karavali Times

728x90

23 November 2026

ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎಐ ತಂತ್ರಜ್ಞಾನದ ಬಲ, ತುರ್ತು ಚಿಕಿತ್ಸೆಗೆ 2.50 ಲಕ್ಷದವರೆಗೆ ನೆರವು, 100 ಹೊಸ ಅಂಬ್ಯುಲೆನ್ಸ್ ಗಳ ಸೇರ್ಪಡೆ : ಡಾ ಶಾಲಿನಿ ರಜನೀಶ್

ಬೆಂಗಳೂರು, ನವಂಬರ್ 23, 2026 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ರಸ್ತೆ ಅಪಘಾತಗಳು ಮತ್ತು ಅವುಗಳಿಂದ ಸಂಭವಿಸುವ ಸಾವು-ನೋವುಗಳನ್ನು ಗಣನೀಯವಾಗಿ ತಗ್ಗಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸ್ಮಾರ್ಟ್ ಎನ್ ಫೆÇೀರ್ಸ್ ಮೆಂಟ್ ವ್ಯವಸ್ಥೆ, ಅಪಘಾತ ವಲಯಗಳ ವೈಜ್ಞಾನಿಕ ಸುಧಾರಣೆ ಹಾಗೂ ತ್ವರಿತ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ತಿಳಿಸಿದ್ದಾರೆ. 

24ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾಹಿತಿ ನೀಡಿದ ಅವರು, ರಸ್ತೆ ಸುರಕ್ಷತೆಯು ಕೇವಲ ಒಂದು ಇಲಾಖೆಯ ಕೆಲಸವಲ್ಲ, ಪೆÇಲೀಸ್, ಸಾರಿಗೆ, ಆರೋಗ್ಯ, ಲೋಕೋಪಯೋಗಿ, ನಗರಾಭಿವೃದ್ಧಿ ಮತ್ತು ಸ್ಥಳೀಯ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾದ ಮಹತ್ವದ ಸಾರ್ವಜನಿಕ ಜವಾಬ್ದಾರಿಯಾಗಿದೆ ಎಂದರು. 

ಅಪಘಾತ ಪ್ರಮಾಣದಲ್ಲಿ ಇಳಿಕೆ

ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದ್ದರೂ, 2018ರಿಂದ 2025ರ ಅವಧಿಯಲ್ಲಿ ಪ್ರತಿ 10,000 ವಾಹನಗಳಿಗೆ ಸಂಭವಿಸುವ ಅಪಘಾತಗಳ ಪ್ರಮಾಣ ಶೇ. 27ರಷ್ಟು (17.28 ರಿಂದ 12.56ಕ್ಕೆ) ಹಾಗೂ ಮರಣ ದರ ಶೇ. 21ರಷ್ಟು (4.55 ರಿಂದ 3.59ಕ್ಕೆ) ಇಳಿಕೆಯಾಗಿದೆ. ಪ್ರಸಕ್ತ 2026ರ ಜನವರಿಯಿಂದ ಅಕ್ಟೋಬರ್ ವರೆಗೆ 37,443 ಅಪಘಾತಗಳು ಸಂಭವಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮೃತಪಟ್ಟವರ ಸಂಖ್ಯೆಯಲ್ಲಿ 220 ರಷ್ಟು ಇಳಿಕೆ ಕಂಡುಬಂದಿದೆ. 

ಎ.ಐ ಕ್ಯಾಮೆರಾ ಹಾಗೂ ಕಪ್ಪು ಸ್ಥಳಗಳ ಸುಧಾರಣೆ

ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತ ಮಾಡಿ ಪರಾರಿಯಾಗುವ (ಹಿಟ್ ಅಂಡ್ ರನ್) ವಾಹನಗಳನ್ನು ಪತ್ತೆಹಚ್ಚಲು ಗುರುತಿಸಲಾದ 87 ಸ್ಥಳಗಳ ಪೈಕಿ 27 ಕಡೆ ಎ.ಐ ಆಧಾರಿತ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 20 ಕಡೆ ಇ-ಚಲನ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಈಗಾಗಲೇ 6,500 ಚಲನ್‍ಗಳನ್ನು ದಾಖಲಿಸಲಾಗಿದ್ದು, ಉಳಿದ 60 ಸ್ಥಳಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಗುರುತಿಸಿರುವ ಅಪಘಾತ ಸಂಭವಿಸುವ ಬ್ಲಾಕ್ ಸ್ಪಾಟ್ ಗಳಲ್ಲಿ  ಅಲ್ಪಾವಧಿ ಮತ್ತು ದೀರ್ಘಾವಧಿ ಸುಧಾರಣಾ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. 

ಚಾಲನಾ ಪರವಾನಗಿ ಪರೀಕ್ಷೆಗೂ ಮುನ್ನ ಜಾಗೃತಿ ವಿಡಿಯೋ ಕಡ್ಡಾಯ

ಚಾಲನಾ ತರಬೇತಿ ಸಂಸ್ಥೆಗಳ ಮೇಲೆ ಸಾರಿಗೆ ಇಲಾಖೆ ನಿರಂತರ ನಿಗಾ ಇಡಬೇಕು ಹಾಗೂ ಚಾಲನಾ ಪರವಾನಗಿ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಹೆಲ್ಮೆಟ್, ಸೀಟ್ ಬೆಲ್ಟ್, ವೇಗ ನಿಯಂತ್ರಣ, ಮದ್ಯಪಾನ ಮತ್ತು ಮೊಬೈಲ್ ಬಳಕೆ ನಿಷೇಧದ ಕುರಿತ ಜಾಗೃತಿ ವಿಡಿಯೋಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ವಿಡಿಯೋ ವೀಕ್ಷಿಸಿ ನಿಯಮಗಳನ್ನು ಅರಿತಿರುವ ಬಗ್ಗೆ ಅಭ್ಯರ್ಥಿಗಳಿಂದ ಸಹಿ ಪಡೆಯುವ ವ್ಯವಸ್ಥೆ ಜಾರಿಗೆ ತರುವಂತೆ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ. 

ತುರ್ತು ಚಿಕಿತ್ಸೆಗೆ ರೂ. 2.50 ಲಕ್ಷದವರೆಗೆ ನಗದು ರಹಿತ ನೆರವು

ಪಿಎಂ-ರಾಹತ್ ಹಾಗೂ ಸಿಎಂ-ಆರ್ಕ್ : 2026ರ ಎಪ್ರಿಲ್ 15ರಿಂದ ಜಾರಿಯಾಗಿರುವ ‘ಪಿಎಂ-ರಾಹತ್’ ಯೋಜನೆಯಡಿ ಅಪಘಾತದ ಸಂತ್ರಸ್ತರಿಗೆ 7 ದಿನಗಳವರೆಗೆ ಗರಿಷ್ಠ 1.50 ಲಕ್ಷದವರೆಗೆ ನಗದುರಹಿತ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ‘ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ’ ಯೋಜನೆಯಡಿ ಹೆಚ್ಚುವರಿ 1 ಲಕ್ಷ ಸೇರಿದಂತೆ ಒಟ್ಟು 2.50 ಲಕ್ಷದವರೆಗೆ ಚಿಕಿತ್ಸಾ ನೆರವು ಲಭ್ಯವಿದೆ. ರಾಜ್ಯದ 3,445 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಈ ಯೋಜನೆಯಡಿ ನೋಂದಣಿಯಾಗಿವೆ. 

100 ಹೊಸ ಆಂಬುಲೆನ್ಸ್

ತುರ್ತು ಸ್ಪಂದನೆಗಾಗಿ 108 ಮತ್ತು 102 ಸೇವೆಗಳನ್ನು 112 ಸಹಾಯವಾಣಿಯೊಂದಿಗೆ ಸಂಯೋಜಿಸಲಾಗಿದೆ. ಜೊತೆಗೆ 100 ಹೊಸ ಬಿ ಎಲ್ ಎಸ್ ಆಂಬುಲೆನ್ಸ್ ಗಳ ಖರೀದಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸೇವೆಗೆ ಲಭ್ಯವಾಗಲಿವೆ. ಜಿಲ್ಲಾ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 

322 ಕೋಟಿ ಕ್ರಿಯಾ ಯೋಜನೆ

2026-27ನೇ ಸಾಲಿನ ರಸ್ತೆ ಸುರಕ್ಷತಾ ಕ್ರಮಗಳಿಗಾಗಿ ಒಟ್ಟು 322 ಕೋಟಿ ರೂಪಾಯಿ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಇದರಲ್ಲಿ 233.11 ಕೋಟಿಯನ್ನು ಮುಂದುವರಿದ ಕಾಮಗಾರಿಗಳಿಗೆ ಹಾಗೂ  88.89 ಕೋಟಿಯನ್ನು ಹೊಸ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಾಧ್ಯಮಗಳು, ಚಿತ್ರಮಂದಿರಗಳು ಮತ್ತು ಬಸ್ ನಿಲ್ದಾಣಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದು ಡಾ. ಶಾಲಿನಿ ರಜನೀಶ್ ತಿಳಿಸಿದರು. 

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಂಚಾರ ವಿಭಾಗದ ಪೆÇಲೀಸ್ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎಐ ತಂತ್ರಜ್ಞಾನದ ಬಲ, ತುರ್ತು ಚಿಕಿತ್ಸೆಗೆ 2.50 ಲಕ್ಷದವರೆಗೆ ನೆರವು, 100 ಹೊಸ ಅಂಬ್ಯುಲೆನ್ಸ್ ಗಳ ಸೇರ್ಪಡೆ : ಡಾ ಶಾಲಿನಿ ರಜನೀಶ್ Rating: 5 Reviewed By: karavali Times
Scroll to Top