ಮಂಗಳೂರು, ನವೆಂಬರ್ 02, 2026 (ಕರಾವಳಿ ಟೈಮ್ಸ್) : ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಮುಂಬರುವ ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆ ಕುರಿತು ವ್ಯಾಪಕ ಅರಿವು ಮತ್ತು ಜಾಗೃತಿ ಮೂಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನ 1 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಡಿಯುವ ನೀರು ಹಾಗೂ ವಿವಿಧ ಇಲಾಖೆಗಳ ವಿಷಯಗಳ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ಬೇಸಿಗೆಯಲ್ಲಿ ನೀರಿಗಾಗಿ ಯಾವುದೇ ರೀತಿಯಲ್ಲಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡದೆ, ಮಿತವಾಗಿ ಹಾಗೂ ಜಾಗರೂಕತೆಯಿಂದ ಬಳಸಲು ಸಾರ್ವಜನಿಕರಲ್ಲಿ ವಿನಂತಿಸಬೇಕು. ಸ್ಥಳೀಯಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳ ಮುಖಾಂತರ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರಿನ ಪೂರೈಕೆ ಮತ್ತು ಸಂಬಂಧಿತ ಅಂದಾಜು ಕಾಮಗಾರಿಗಳ ವೆಚ್ಚಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರರ ಖಾತೆಯಲ್ಲಿ ಈಗಾಗಲೇ ಸಾಕಷ್ಟು ಅನುದಾನ ಲಭ್ಯವಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಒಂದು ವೇಳೆ ಈ ಅನುದಾನ ಸಾಲದೇ ಬಂದು ಹೆಚ್ಚುವರಿ ಹಣಕಾಸಿನ ಅಗತ್ಯವಿದ್ದಲ್ಲಿ, ತಕ್ಷಣವೇ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಅನುದಾನ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಖಾದರ್ ಸೂಚಿಸಿದರು.










0 comments:
Post a Comment