ಬಂಟ್ವಾಳ, ಮೇ 28, 2025 (ಕರಾವಳಿ ಟೈಮ್ಸ್) : ಕರ್ನಾಟಕ ಸರಕಾರದ ನಗರಾಭಿವೃದ್ದಿ ಇಲಾಖೆಯ ಆದೇಶದಂತೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ವ್ಯಾಪಾರಿಗಳು ಪ್ರತ್ಯೇಕ ಪರವಾನಿಗೆ ಪಡೆಯುವುದು ಕಡ್ಡಾಯ ಎಂದು ಪುರಸಭಾ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಜಂಟಿಯಾಗಿ ಆದೇಶ ಹೊರಡಿಸಿದ್ದಾರೆ.
ಸರಕಾರದ ಆದೇಶದಂತೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಲು ಪ್ರತ್ಯೇಕ ಪರವಾನಿಗೆ ಪಡೆಯುವುದು ಕಡ್ಡಾಯಗೊಳಿಸಲಾಗಿದ್ದು, ತಂಬಾಕು ಉತ್ಪನ್ನ ಮಾರಾಟ ವ್ಯಾಪಾರಿಗಳು ಕಡ್ಡಾಯವಾಗಿ ಪ್ರತ್ಯೇಕವಾಗಿ ಪರವಾನಿಗೆ ಪಡೆಯಲು ಪುರಸಭೆಯಿಂದ ಅರ್ಜಿ ನಮೂನೆಯನ್ನು ಪಡೆದು ಅಗತ್ಯ ಮಾಹಿತಿಗಳೊಂದಿಗೆ ಮೂರು ದಿನಗಳೊಳಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿ ಶುಲ್ಕ 500/-ರೂಪಾಯಿಗಳಾಗಿದ್ದು, ಪರವಾನಿಗೆ 5 ವರ್ಷ ಚಾಲ್ತಿಯಲ್ಲಿರುತ್ತದೆ.
ತಂಬಾಕು ಉತ್ಪನ್ನ ಮಾರಾಟ ಮಾಡುವ ವ್ಯಾಪಾರಸ್ಥರು ಆಧಾರ್ ಕಾರ್ಡ್, ಪಾನ್ ಕಾಡ್, ಬಾಡಿಗೆ ಕರಾರು ಪತ್ರ, ಉದ್ದಿಮೆ ಪರವಾನಿಗೆ ಹಾಗೂ ಭಾವಚಿತ್ರ ಈ ದಾಖಲೆಗಳನ್ನು ನೀಡಿ ಪ್ರತ್ಯೇಕ ಪರವಾನಿಗೆ ಪಡೆಯತಕ್ಕದ್ದು. ಮೇ 31 ರ ನಂತರ ಪರವಾನಿಗೆ ಪಡೆಯದೇ ತಂಬಾಕು ಉತ್ಪನ್ನ ಮಾರಾಟ ಮಾಡುವ ವ್ಯಾಪಾರಸ್ಥರ ಮೇಲೆ ಕಾನೂನು ಕ್ರಮವನ್ನು ಜರಗಿಸಲಾಗುವುದು ಎಂದು ಪುರಸಭಾಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ಜಂಟಿ ಪ್ರಕಟಣೆ ತಿಳಿಸಿದೆ.
0 comments:
Post a Comment