ಚುನಾವಣೆ ಸಂದರ್ಭ ರಾಜಕಾರಣ ಮಾಡೋಣ, ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ : ಬಾನು ಮುಶ್ತಾಕ್ ವಿರೋಧಿಗಳಿಗೆ ಸಿಎಂ ಸಿದ್ದು ಸಲಹೆ - Karavali Times ಚುನಾವಣೆ ಸಂದರ್ಭ ರಾಜಕಾರಣ ಮಾಡೋಣ, ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ : ಬಾನು ಮುಶ್ತಾಕ್ ವಿರೋಧಿಗಳಿಗೆ ಸಿಎಂ ಸಿದ್ದು ಸಲಹೆ - Karavali Times

728x90

22 September 2025

ಚುನಾವಣೆ ಸಂದರ್ಭ ರಾಜಕಾರಣ ಮಾಡೋಣ, ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ : ಬಾನು ಮುಶ್ತಾಕ್ ವಿರೋಧಿಗಳಿಗೆ ಸಿಎಂ ಸಿದ್ದು ಸಲಹೆ

ಬೆಂಗಳೂರು, ಸೆಪ್ಟೆಂಬರ್ 22, 2025 (ಕರಾವಳಿ ಟೈಮ್ಸ್) : ನಾಡಿನ ಬಹುಸಂಖ್ಯಾತ ಜನರು ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಿರುವುದನ್ನು ಸ್ವಾಗತಿಸಿದ್ದಾರೆ. ಇದು ಹೆಮ್ಮೆಯ ಸಂಗತಿ. ಬಾನು ಮುಷ್ತಾಕ್ ಮುಸ್ಲಿಂ ಮಹಿಳೆ ಎನ್ನುವುದಕ್ಕಿಂತ ಮಾನವೀಯ ಮೌಲ್ಯ ಪಾಲಿಸುವ ಮನುಷ್ಯರು. ನಾವು ಮನುಷ್ಯರು ಪರಸ್ಪರ ಪ್ರೀತಿಯಿಂದ ಬಾಳಬೇಕು. ದ್ವೇಷ ಮನುಷ್ಯತ್ವದ ವಿರೋಧಿ. ಆದ್ದರಿಂದ ದ್ವೇಷವನ್ನು ಆಚರಿಸುವವರು ಮನುಷ್ಯತ್ವದ ವಿರೋಧಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮ್ಯ ಹೇಳಿದರು. 

ಐತಿಹಾಸಿ ನಾಡಹಬ್ಬ ದಸರಾ ಉದ್ಘಾಟನೆಯ ಪ್ರಯುಕ್ತ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ದಸರಾ ಉದ್ಘಾಟನೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಅವರು, ಗೋಡಾ ಹೈ-ಮೈದಾನ್ ಹೈ, ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ. ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ ಎಂದು ಸಲಹೆ ನೀಡಿದರು. 

ದಸರಾ ಉತ್ಸವ ಮತ್ತು ನಮ್ಮ ಸಾಂಸ್ಕೃತಿಕ ಹಿರಿಮೆಯ ಪರಿಚಯ ಇಲ್ಲದವರು ಬಾನು ಮುಷ್ತಾಕ್ ಅವರಿಗೆ ವಿರೋಧಿಸಿದ್ದರು. ಇತಿಹಾಸ ತಿರುಚಿ, ಸ್ವಾರ್ಥ ರಾಜಕೀಯ ಮಾಡುವುದು ಅಕ್ಷಮ್ಯ ಅಪರಾಧ. ರಾಜಕಾರಣ ಮಾಡುವುದಿದ್ದರೆ ಚುನಾವಣೆಯಲ್ಲಿ ಮಾಡೋಣ. ನಾಡ ಹಬ್ಬದ ವಿಚಾರದಲ್ಲಿ ಕೆಳ ಮಟ್ಟದ ರಾಜಕಾರಣ ಮಾಡುವುದು ಕ್ಷುಲ್ಲಕ ಎಂದ ಸಿಎಂ ನಾಡಿನ ಬಹುಸಂಖ್ಯಾತ ಸಮುದಾಯ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಿರುವುದನ್ನು ಸ್ವಾಗತಿಸಿದೆ. ಇದು ಹೆಮ್ಮೆಯ ಸಂಗತಿ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಿರುವುದು ಸೂಕ್ತವಾಗಿದೆ ಎಂದರು. 

ಸಂವಿಧಾನದ ಮೌಲ್ಯಗಳಾದ ಸಹಿಷ್ಣುತೆ ಪಾಲಿಸುವವರು ಮಾತ್ರ ಅಪ್ಪಟ ಭಾರತೀಯರು. ನಮ್ಮ ಸಂವಿಧಾನವು ಜಾತ್ಯತೀತ ಮತ್ತು ಧರ್ಮಾತೀತವಾದುದ್ದು. ಇದನ್ನೇ ಹೈಕೋರ್ಟ್, ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ ಎಂದ ಸಿದ್ದರಾಮಯ್ಯ ಯಾರಿಗೆ ಭಾರತೀಯರು ಎನ್ನುವ ಹೆಮ್ಮೆ ಇರುತ್ತದೋ ಅವರಿಗೆ ಮಾತ್ರ ಸಂವಿಧಾನದ ಬಗ್ಗೆ ಹೆಮ್ಮೆ ಇರುತ್ತದೆ. ನಮಗೆ ನಮ್ಮ ಹಕ್ಕು ಮತ್ತು ಜವಾಬ್ದಾರಿಗಳು ಗೊತ್ತಾಗಬೇಕಾದರೆ ಸಂವಿಧಾನ ಗೊತ್ತಿರಬೇಕು. ರಾಷ್ಟ್ರಕವಿ ಕುವೆಂಪು ಅವರ ಮಾತನ್ನು ನಾವು ಮರೆಯಬಾರದು. ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರ ಬರಬೇಕು, ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ರಾಜ್ಯವನ್ನು ಗಟ್ಟಿಗೊಳಿಸಬೇಕು ಎಂದರು.  

ಸಂವಿಧಾನದ ಆಶಯದಂತೆ ಎಲ್ಲಾ ಜಾತಿ, ಎಲ್ಲಾ ಧರ್ಮದ ಮತ್ತು ಎಲ್ಲಾ ಪಕ್ಷದ ಬಡವರಿಗೆ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಿಜೆಪಿಯವರು ಗ್ಯಾರಂಟಿಗಳ ಫಲಾನುಭವಿಗಳಲ್ಲವೇ? ಈ ಗ್ಯಾರಂಟಿಗಳು ನಿಲ್ಲುವುದಿಲ್ಲ. ನಮ್ಮ ಗ್ಯಾರಂಟಿಗಳಿಂದಾಗಿ ನಮ್ಮ ರಾಜ್ಯದ ಜನರ ತಲಾದಾಯ ದೇಶದಲ್ಲೇ ನಂಬರ್ ಒನ್ ಆಗಿದೆ. ಈಗ ಜಿಎಸ್‍ಡಿಪಿಯಲ್ಲಿ ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ ಎಂದ ಸಿದ್ದರಾಮಯ್ಯ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ವಿರೋಧಿಸಿದವರಿಗೆ ಹೈಕೋರ್ಟ್ ಮತ್ತು ಸುಪ್ರೀಕೋರ್ಟ್‍ನಲ್ಲಿ ಸೋಲಾಯಿತು, “ನನ್ನ ಹೆಸರಲ್ಲೇ ಇಬ್ಬರು ದೇವರಿದ್ದಾರೆ. ಸಿದ್ದ ಅಂದರೆ ಶಿವ, ರಾಮ ಅಂದರೆ ವಿಷ್ಣು”, ನನಗೆ ದೇವರ ಬಗ್ಗೆ ಪ್ರೀತಿ, ಭಕ್ತಿ ಎಲ್ಲವೂ ಇದೆ. ಬೇರೆಯವರಂತೆ ದೇವರ ಹೆಸರಲ್ಲಿ ದ್ವೇಷ ಹರಡುವವರು ನಾವಲ್ಲ. ಹೀಗಾಗಿ ಬಾನು ಮುಷ್ತಾಕ್‍ಗೆ ವಿರೋಧ ವ್ಯಕ್ತಪಡಿಸಿದ ಮೂರ್ಖರಿಗೆ ಸುಪ್ರೀಂಕೋರ್ಟ್ ಸಂವಿಧಾನದ ಪೀಠಿಕೆ ಓದಲು ಹೇಳಿದೆ ಎಂದವರು ಛಾಟಿ ಬೀಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಚುನಾವಣೆ ಸಂದರ್ಭ ರಾಜಕಾರಣ ಮಾಡೋಣ, ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ : ಬಾನು ಮುಶ್ತಾಕ್ ವಿರೋಧಿಗಳಿಗೆ ಸಿಎಂ ಸಿದ್ದು ಸಲಹೆ Rating: 5 Reviewed By: karavali Times
Scroll to Top