ಟ್ಯಾಬ್ಲೆಟ್ ಆರಿಫ್ ಕೊಲೆ ಪ್ರಕರಣ : ಮತ್ತೋರ್ವ ಆರೋಪಿ ಬಂಧನ, ಬಂಧಿತರ ಸಂಖ್ಯೆ 12ಕ್ಕೇರಿಕೆ - Karavali Times ಟ್ಯಾಬ್ಲೆಟ್ ಆರಿಫ್ ಕೊಲೆ ಪ್ರಕರಣ : ಮತ್ತೋರ್ವ ಆರೋಪಿ ಬಂಧನ, ಬಂಧಿತರ ಸಂಖ್ಯೆ 12ಕ್ಕೇರಿಕೆ - Karavali Times

728x90

25 May 2026

ಟ್ಯಾಬ್ಲೆಟ್ ಆರಿಫ್ ಕೊಲೆ ಪ್ರಕರಣ : ಮತ್ತೋರ್ವ ಆರೋಪಿ ಬಂಧನ, ಬಂಧಿತರ ಸಂಖ್ಯೆ 12ಕ್ಕೇರಿಕೆ

ಮಂಗಳೂರು, ಮೇ 25, 2026 (ಕರಾವಳಿ ಟೈಮ್ಸ್) : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಫ್ಲೈ ಓವರ್ ಮೇಲೆ ಮಾರ್ಚ್ 27 ರಂದು ನಡೆದ ಉಚ್ಚಿಲ-ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೈನ್ ಅಲಿಯಾಸ್ ಟ್ಯಾಬ್ಲೆಟ್ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊರ್ವ ಆರೋಪಿಯನ್ನು ಮೇ 25 ರಂದು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಮೂಲತಃ ಪಡೀಲ್ ಸಮೀಪದ ಬಜಾಲ್-ನಂತೂರು ಶಾಂತಿನಗರ ಸಿರಿಸೀಮೆ ನರ್ಸರಿ ಹತ್ತಿರದ ನಿವಾಸಿ, ಪ್ರಸ್ತುತ ಪಡೀಲ್-ವಿಜಯನಗರದ ರೈಲ್ವೇ ಸ್ಟೇಶನ್ ಹಿಂದುಗಡೆ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮೊಹಮ್ಮದ್ ಇಬ್ರಾಹಿಂ ಸಿನಾನ್ ಅಲಿಯಾಸ್ ಚಿನ್ನು (21) ಎಂದು ಹೆಸರಿಸಲಾಗಿದೆ. 

ಬಂಧಿತ ಆರೋಪಿಯು 2026ರ ಫೆಬ್ರವರಿ ತಿಂಗಳಲ್ಲಿ ಆರೀಫ್ ಹುಸೇನ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಸಮಯ ಹಾಜರಿದ್ದ ಬಗ್ಗೆ ಹಾಗೂ ಮಾರ್ಚ್ 27 ರಂದು ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಈತ ಇತ್ತೀಚೆಗೆ ಮೃತಪಟ್ಟಿದ್ದ ರೌಡಿಶೀಟರ್ ಟೊಪ್ಪಿ ನೌಫಾಲ್ ಎಂಬಾತನ ಸಹೋದರನಾಗಿದ್ದು, ಈತನ ವಿರುದ್ದ 2025ರಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ ಹಾಗೂ 2024ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮಾರ್ಚ್ 27 ರಂದು ಬೆಳಗಿನ ಜಾವ, ತೊಕ್ಕೊಟ್ಟು ಪ್ಲೈ ಓವರ್ ಮೇಲೆ ಬೈಕಿನಲ್ಲಿ ಸಂಚರಿಸುತ್ತಿದ್ದ ಆರೀಫ್ ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕೆಡವಿ, ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಬಳಿಕ ಕೃತ್ಯಕ್ಕೆ ಬಳಸಿದ ಕಾರನ್ನು ಬಂಟ್ವಾಳ ತಾಲೂಕಿನ ಬುಡೋಳಿ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆಯನ್ನು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು. 

ಆರಿಫ್ ಕೊಲೆ ಪ್ರಕರಣದಲ್ಲಿ ಈಗಾಗಲೇ ಮೊಹಮ್ಮದ್ ರಿಫಾತ್ ಆಲಿ, ಇಬ್ರಾಹಿಂ ಖಲೀಲ್, ಅಶ್ಫಕ್ ಅಲಿಯಾಸ್ ಜುಟ್ಟು ಅಶ್ಫಕ್, ಉಮ್ಮರ್ ಫಾರೂಕ್ ಇರ್ಫಾನ್, ಮೊಹಮ್ಮದ್ ಶಾಕೀರ್, ಮೊಹಮ್ಮದ್ ರಿಜ್ವಾನ್ ಅಲಿಯಾಸ್ ರಿಜ್ವಾನ್, ಮೊಹಮ್ಮದ್ ಇರ್ಷಾದ್ ಅಲಿಯಾಸ್ ಅಕುಡು, ಮಹಮ್ಮದ್ ಹರ್ಷಾದ್, ನಿಶಾಕ್ ಅಲಿಯಾಸ್ ಪುಚ್ಚೆ ನಿಶಾಕ್, ಬಿ ಜುನೈದ್ ಅಲಿಯಾಸ್ ಕೊಕ್ಕಡ ಜುನೈದ್ ಹಾಗೂ ಮೊಹಮ್ಮದ್ ಸುಹೇಲ್ ಅಲಿಯಾಸ್ ಚಿಯಾ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳೆಲ್ಲರ ವಿರುದ್ದವೂ ಕೆಕೋಕಾ ಕಾಯ್ದೆಯಡಿ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಟ್ಯಾಬ್ಲೆಟ್ ಆರಿಫ್ ಕೊಲೆ ಪ್ರಕರಣ : ಮತ್ತೋರ್ವ ಆರೋಪಿ ಬಂಧನ, ಬಂಧಿತರ ಸಂಖ್ಯೆ 12ಕ್ಕೇರಿಕೆ Rating: 5 Reviewed By: karavali Times
Scroll to Top