ಬಂಟ್ವಾಳ, ಜೂನ್ 20, 2026 (ಕರಾವಳಿ ಟೈಮ್ಸ್) : ತುಂಬೆ ಪದವಿ ಪೂರ್ವ ಕಾಲೇಜಿನ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ ನಾಯಕರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ನಿಹಾದ್ ಹಾಗೂ ಉಪನಾಯಕರಾಗಿ ಅದೇ ವಿಭಾಗದ ವಿದ್ಯಾರ್ಥಿನಿ ಫಾತಿಮತುಲ್ ಅಲೀಮಾ ಸನಾಮಾ ಅವರು ಚುನಾಯಿತರಾಗಿದ್ದಾರೆ.
ಜೂನ್ 20 ರಂದು ಕಾಲೇಜಿನಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ್ನು ಬಿಂಬಿಸುವ ರೀತಿಯಲ್ಲಿ ನಡೆದ ಚುನಾವಣೆಯಲ್ಲಿ ನಾಯಕರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅತ್ಯಧಿಕ ಮತಗಳನ್ನು ಪಡೆದ ವಿದ್ಯಾರ್ಥಿಗಳು ಸಂಸತ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಶಾಂತಿಯುತ, ಪಾರದರ್ಶಕ ಹಾಗೂ ಮಾದರಿಯುತವಾಗಿ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಫಲಿತಾಂಶ ಪ್ರಕಟಿಸಿದ ಕಾಲೇಜು ಪ್ರಾಂಶುಪಾಲರು, ನೂತನವಾಗಿ ಆಯ್ಕೆಯಾದ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿ, ವಿದ್ಯಾರ್ಥಿಗಳ ಹಿತಾಸಕ್ತಿಗೆ ಆದ್ಯತೆ ನೀಡಿ ಜವಾಬ್ದಾರಿಯುತ ನಾಯಕತ್ವವನ್ನು ಪ್ರದರ್ಶಿಸುವಂತೆ ಕರೆ ನೀಡಿದರಲ್ಲದೆ ವಿದ್ಯಾರ್ಥಿ ಸಂಸತ್ತು ಕಾಲೇಜಿನಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ, ಸಂಘಟನಾ ಕೌಶಲ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದ್ದು, ಆಯ್ಕೆಯಾದ ಪ್ರತಿನಿಧಿಗಳು ವಿದ್ಯಾರ್ಥಿಗಳ ಆಶೋತ್ತರಗಳಿಗೆ ಸ್ಪಂದಿಸಿ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಗೆ ನೀಡಿದರು.
ಚುನಾವಣೆಯ ಸಮಗ್ರ ಪ್ರಕ್ರಿಯೆಗೆ ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ಮಾರ್ಗದರ್ಶನ ನೀಡಿದರು. ಚುನಾವಣಾಧಿಕಾರಿಯಾಗಿ ಸಾಯಿರಾಂ ಜೆ ನಾಯಕ್ ಕೆ, ಸಹ ಚುನಾವಣಾಧಿಕಾರಿಗಳಾಗಿ ಶರತ್ ಆಳ್ವ ಚನಿಲ ಹಾಗೂ ಚಂದ್ರಶೇಖರ್ ಶೆಟ್ಟಿ ಕರ್ತವ್ಯ ನಿರ್ವಹಿಸಿದರು. ಮತಗಟ್ಟೆ ಅಧಿಕಾರಿಗಳಾಗಿ ಡಾ ವಿಶ್ವನಾಥ ಪೂಜಾರಿ, ಅಬ್ದುಲ್ ರಹಿಮಾನ್ ಡಿ ಬಿ, ಕವಿತಾ ಕೆ, ಬೇಬಿ, ನೀತಾಶ್ರೀ, ಪ್ರಫುಲ್ಲ ಶೆಟ್ಟಿ ಹಾಗೂ ಚಿತ್ರಾ ಅವರು ಕಾರ್ಯನಿರ್ವಹಿಸಿದರು. ಕಾಲೇಜು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.












0 comments:
Post a Comment