ಮಂಗಳೂರು, ಜೂನ್ 21, 2026 (ಕರಾವಳಿ ಟೈಮ್ಸ್) : 2014ರಲ್ಲಿ ಪ್ರಾರಂಭಗೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಾಚೀನ ಜೀವನ ಶೈಲಿಗೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಗೌರವವಾಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂನ್ 21 ರಂದು ನಗರದ ಪುರಭವನದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯಯುತ ಜೀವನವನ್ನು ಹೇಗೆ ಪಡೆಯಬೇಕು ಎಂಬುದನ್ನು ಭಾರತವು ಜಗತ್ತಿಗೆ ಕಲಿಸಿದೆ. ಇಂದಿನ ಜಾಗತಿಕ ಪರಿಸ್ಥಿತಿಯನ್ನು ಅವಲೋಕಿಸಿದಾಗ ಯೋಗದ ಮಹತ್ವವು ಎಷ್ಟು ಅಗತ್ಯವಾಗಿದೆ ಎಂದು ತಿಳಿದು ಬರುತ್ತದೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ದರ್ಶನ್ ಎಚ್ ವಿ , ಜಿಲ್ಲಾ ಸರ್ಜನ್ ಡಾ ಶಿವಪ್ರಕಾಶ್, ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಡಿಸಿಪಿ ರವಿಶಂಕರ್, ಎಎಸ್ಪಿ ಅನಿಲ್ ಕುಮಾರ್, ಬ್ರಹ್ಮಕುಮಾರಿ ಅಂಬಿಕಾ ಭಾಗವಹಿಸಿದ್ದರು.
ಇದೇ ವೇಳೆ ಯೋಗದಲ್ಲಿ ವಿಶ್ವ ದಾಖಲೆ ಮಾಡಿದ ಕಡಬ ತಾಲೂಕಿನ ಏನಕಲ್ಲು ನಿವಾಸಿ, 6ನೇ ತರಗತಿ ವಿದ್ಯಾರ್ಥಿ ಅಕ್ಷಯ ಬಿ ಎಂ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆಯುಷ್ ಅಧಿಕಾರಿ ಡಾ ಮಣಿಕರ್ಣಿಕಾ ಸ್ವಾಗತಿಸಿದರು. ಬಳಿಕ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಅವರ ನೇತೃತ್ವದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಿತು.
















0 comments:
Post a Comment