ಇಲಾಖೆಗಳ ನಿರ್ಲಕ್ಷ್ಯ : ಬಂಗ್ಲೆಗುಡ್ಡೆಯಲ್ಲಿ ಹಾಸ್ಟೆಲ್ ಕಟ್ಟಡ ಕುಸಿದು ಬಿದ್ದು ವರ್ಷಗಳೇ ಉರುಳಿವೆ, ಇದೀಗ ಶಿಥಿಲಗೊಂಡ ಅಂಗನವಾಡಿಯೂ ಶಿಫ್ಟ್ - Karavali Times ಇಲಾಖೆಗಳ ನಿರ್ಲಕ್ಷ್ಯ : ಬಂಗ್ಲೆಗುಡ್ಡೆಯಲ್ಲಿ ಹಾಸ್ಟೆಲ್ ಕಟ್ಟಡ ಕುಸಿದು ಬಿದ್ದು ವರ್ಷಗಳೇ ಉರುಳಿವೆ, ಇದೀಗ ಶಿಥಿಲಗೊಂಡ ಅಂಗನವಾಡಿಯೂ ಶಿಫ್ಟ್ - Karavali Times

728x90

23 July 2026

ಇಲಾಖೆಗಳ ನಿರ್ಲಕ್ಷ್ಯ : ಬಂಗ್ಲೆಗುಡ್ಡೆಯಲ್ಲಿ ಹಾಸ್ಟೆಲ್ ಕಟ್ಟಡ ಕುಸಿದು ಬಿದ್ದು ವರ್ಷಗಳೇ ಉರುಳಿವೆ, ಇದೀಗ ಶಿಥಿಲಗೊಂಡ ಅಂಗನವಾಡಿಯೂ ಶಿಫ್ಟ್

ಬಂಟ್ವಾಳ, ಜುಲೈ 23, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಎಂಬಲ್ಲಿನ ಅಂಗನವಾಡಿ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಪುಟಾಣಿಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಬಗ್ಗೆ ಮನವರಿಕೆ ಮಾಡಿಕೊಂಡ ಕೇಂದ್ರದ ಕಾರ್ಯಕರ್ತೆಯರ ಮನವಿ ಮೇರೆಗೆ ಕೇಂದ್ರವನ್ನು ಸ್ಥಳಾಂತರಿಸಲಾಗಿದೆ. ಇಲ್ಲಿನ ಅಂಗನವಾಡಿ ಕೇಂದ್ರದ ಶಿಥಿಲಾವಸ್ಥೆ ಹಾಗೂ ಅವ್ಯವಸ್ಥೆಗಳ ಬಗ್ಗೆ ಈ ಹಿಂದೆಯೇ ಇಲಾಖಾಧಿಕಾರಿಗಳ ಗಮನಕ್ಕೆ ಸ್ಥಳೀಯರು ತಂದಿದ್ದಾರಾದರೂ ದಿವ್ಯ ನಿರ್ಲಕ್ಷ್ಯದಿಂದ ಇದೀಗ ಸ್ಥಳೀಯರಿಗೆ ಕಾಲಡಿಯಲ್ಲಿದ್ದ ಪುಟಾಣಿಗಳ ಕೇಂದ್ರವೊಂದು ದೂರಕ್ಕೆ ಸ್ಥಳಾಂತರಗೊಳ್ಳುವಂತಹ ದುರ್ಗತಿ ಬಂದೊದಗಿದೆ.

ಪ್ರಸ್ತುತ ವರ್ಷದ ಮಳೆಗಾಲದ ಆರಂಭದಲ್ಲೇ ಅಂಗನವಾಡಿ ಕೇಂದ್ರದ ಗೋಡೆಗಳು ಬಿರುಕು ಬಿಟ್ಟಿರುವುದನ್ನು ಕಂಡ ಕೇಂದ್ರದ ಕಾರ್ಯಕರ್ತೆಯರು ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಬಳಿಕ ಬಾಲಕ ವಿಕಾಸ ಸಮಿತಿಯ ಸಭೆ ಕರೆದು ಚರ್ಚಿಸಿ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸುವ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ. ಇದೀಗ ಇಲ್ಲಿನ ಅಂಗನವಾಡಿ ಕೇಂದ್ರವನ್ನು ಪಾಣೆಮಂಗಳೂರು ಪೇಟೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯೊಂದಕ್ಕೆ ಸ್ಥಳಾಂತರಿಸಲಾಗಿದೆ. ಇದು ಈಗ ಇರುವ ಕೇಂದ್ರಕ್ಕಿಂತಲೂ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿದ್ದು, ಈ ಭಾಗದ ಪುಟಾಣಿಗಳ ಅಂಗನವಾಡಿ ಸಹವಾಸಕ್ಕೆ ಕಷ್ಟವಾಗಿದೆ ಎನ್ನುತ್ತಾರೆ ಸ್ಥಳೀಯರು. ಈಗಾಗಲೇ ಖಾಸಗಿ ಪ್ರಿಸ್ಕೂಲ್ ವ್ಯವಸ್ಥೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿದ್ದು, ಕೆಲವೊಂದು ಬಡ ಕುಟುಂಬಕ್ಕೆ ಸೇರಿದ ಮಕ್ಕಳು ಮಾತ್ರ ಶಿಶು ಅಭಿವೃದ್ದಿ ಇಲಾಖೆಯ ಅಧೀನದ ಅಂಗನವಾಡಿ ಕೇಂದ್ರಗಳಿಗೆ ಬಂದು ಸೇರುತ್ತಿವೆ. ಸ್ಥಳೀಯವಾಗಿದ್ದಾಗ ಇಂತಹ ಅಂಗನವಾಡಿ ಕೇಂದ್ರಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕಾಲ್ನಡಿಗೆಯಲ್ಲೇ ಕರೆ ತಂದು ಒಪ್ಪಿಸುತ್ತಿದ್ದರು. ಇದೀಗ ಕೇಂದ್ರ ಅರ್ಧ ಕಿಲೋ ಮೀಟರ್ ದೂರಕ್ಕೆ ಸಾಗಿದಾಗ ಪೋಷಕರು ಪ್ರಯಾಣವೂ ಮತ್ತೆ ಜಾಸ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಮಕ್ಕಳನ್ನು ಕರೆ ತರಲು ವಾಹನಗಳ ಮೊರೆ ಹೋಗಬೇಕಾಗಿದೆ. ಇದರಿಂದಾಗಿ ಕೇಂದ್ರಕ್ಕೆ ಬರುವ ಮಕ್ಕಳ ಸಂಖ್ಯೆಯಲ್ಲಿ ಮತ್ತೆ ಇಳಿಕೆಯಾಗುವ ಸಾಧ್ಯತೆ ಬಗ್ಗೆ ಆತಂಕ ಎದುರಾಗಿದೆ. 

ಬಂಗ್ಲೆಗುಡ್ಡೆಯಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ ಕಟ್ಟಡ ಈಗಾಗಲೇ ಸಂಪೂರ್ಣ ಶಿಥಿಲಗೊಂಡು ಕುಸಿದು ಬಿದ್ದು ವರ್ಷಗಳೇ ಉರುಳುತ್ತಿವೆ. ಇಲ್ಲಿನ ಹಾಸ್ಟೆಲ್ ಸದ್ಯ ಬೇರೆಡೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಇದರ ಪುನರ್ ನಿರ್ಮಣದ ಬಗ್ಗೆ ಇನ್ನೂ ಕೂಡಾ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಶಾಸಕರೂ ಕೂಡಾ ಈ ಬಗ್ಗೆ ಸ್ಥಳಕ್ಕೆ ಭೇಟಿ ಸೂಕ್ತ ವ್ಯವಸ್ಥೆಯ ಭರವಸೆ ನೀಡಿ ಹೋಗಿದ್ದಾರಾದರೂ ಅದು ಕೂಡಾ ಕೈಗೂಡಿಲ್ಲ. ಇದೀಗ ಅದೇ ಸಾಲಿಗೆ ಅಂಗನವಾಡಿ ಕಟ್ಟಡವೂ ಸೇರ್ಪಡೆಗೊಂಡಿದೆ. ಇನ್ನಾದರೂ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಜಂಟಿ ಕಾರ್ಯಪ್ರವೃತ್ತರಾಗಿ ಇಲ್ಲಿನ ಎರಡೂ ವ್ಯವಸ್ಥೆಗಳನ್ನು ಪುನರ್ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಇಲಾಖೆಗಳ ನಿರ್ಲಕ್ಷ್ಯ : ಬಂಗ್ಲೆಗುಡ್ಡೆಯಲ್ಲಿ ಹಾಸ್ಟೆಲ್ ಕಟ್ಟಡ ಕುಸಿದು ಬಿದ್ದು ವರ್ಷಗಳೇ ಉರುಳಿವೆ, ಇದೀಗ ಶಿಥಿಲಗೊಂಡ ಅಂಗನವಾಡಿಯೂ ಶಿಫ್ಟ್ Rating: 5 Reviewed By: karavali Times
Scroll to Top