ಬಂಟ್ವಾಳ, ಜುಲೈ 23, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯ ಸಾಲುಮರ ರಸ್ತೆಯ ಬದಿಯಲ್ಲಿ ಮಣ್ಣು ರಾಶಿ ಹಾಕಿರುವ ದೃಶ್ಯಗಳು ಕಂಡು ಬರುತ್ತಿದ್ದು, ಈ ಬಗ್ಗೆ ಪುರಸಭೆಯಾಗಲೀ, ಲೋಕೋಪಯೋಗಿ ಇಲಾಖೆಯಾಗಲೀ ಕಣ್ಣೆತ್ತಿ ನೋಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ವಿವಿಧೆಡೆ ಕಟ್ಟಡ ಕೆಡವಿದ ಮಣ್ಣು ಹಾಗೂ ಕಚ್ಚಾ ವಸ್ತುಗಳನ್ನು ಇಲ್ಲಿನ ಸಾಲುಮರ ರಸ್ತೆ ಬದಿಗೆ ತಂದು ಸುರಿಯಲಾಗುತ್ತಿದೆ. ಮೊದಲೇ ಸಾಲುಮರ ರಸ್ತೆ ಕಿರಿದಾಗಿದ್ದು, ಇಕ್ಕಟ್ಟಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಈ ರೀತಿಯಾಗಿ ಮಣ್ಣು ರಾಶಿ ಹಾಕಿರುವುದು ಮತ್ತಷ್ಟು ಕಿರಿಕಿರಿಗೆ ಕಾರಣವಾಗಿದೆ. ರಸ್ತೆ ಬದಿ ರಾಶಿ ಹಾಕಿರುವ ಮಣ್ಣು ಹಾಗೂ ಕಚ್ಚಾ ವಸ್ತುಗಳು ರಸ್ತೆಯಿಂದ ಕೆಳಗೆ ಕುಸಿದು ನೀರು ಹರಿದು ಹೋಗುವುದನ್ನೂ ತಡೆಯುತ್ತಿದೆ. ಒಂದು ಕಡೆಯಿಂದ ಕಟ್ಟಡ ನಿರ್ಮಾಣವಾಗಿ ನೀರು ಹರಿಯುವ ತೋಡು ಕಿರಿದಾಗಿದ್ದು, ಈ ಬದಿಯಿಂದ ಮಣ್ಣು ಕುಸಿದು ಬಿದ್ದು ಹರಿಯುವ ನೀರಿಗೆ ತಡೆಯಾಗುತ್ತಿದೆ. ಪರಿಣಾಮ ನೀರು ಸರಾಗವಾಗಿ ಹರಿದು ಹೋಗದೆ ಅಲ್ಲೇ ಬ್ಲಾಕ್ ಆಗಿ ಸೊಳ್ಳೆ, ಕ್ರಿಮಿ-ಕೀಟಗಳ ಉತ್ಪತ್ತಿ ತಾಣವಾಗಿ ಪರಿಣಮಿಸಿದೆ. ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಅಲ್ಲದೆ ತ್ಯಾಜ್ಯಗಳನ್ನು ಕೂಡಾ ಇದೇ ಪರಿಸರದಲ್ಲಿ ತಂದು ಎಸೆಯುವ ಕೃತ್ಯ ಕೂಡಾ ನಡೆಯುತ್ತಿದ್ದು, ಇದರಿಂದ ಈ ರಸ್ತೆಯಲ್ಲಿ ಪಾದಚಾರಿಗಳು ನಡೆದಾಡಲೂ ಕೂಡಾ ಅಸಹ್ಯವಾದ ಸ್ಥಿತಿ ಇದೆ.
ಈ ಬಗ್ಗೆ ಈಗಾಗಲೇ ಸಾರ್ವಜನಿಕರು ದೂರು ನೀಡಿದರೂ ರಸ್ತೆಗೆ ಸಂಬಂಧಪಟ್ಟಂತೆ ಲೋಕೋಪಯೋಗಿ ಇಲಾಖಾಧಿಕರಿಗಳಾಗಲೀ, ನೀರು ಹರಿಯದೆ ಇರುವ ಬಗ್ಗೆ ಸ್ಥಳೀಯಾಡಳಿತ ಹಾಗೂ ಆರೋಗ್ಯ ಇಲಾಖೆಯಾಗಲೀ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಸ್ಥಳೀಯ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

















0 comments:
Post a Comment