ಬಂಟ್ವಾಳ, ಜುಲೈ 22, 2026 (ಕರಾವಳಿ ಟೈಮ್ಸ್) : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಖಾಸಗಿ ಬಸ್ಸಿನ ಮೇಲೆ ಬೃಹತ್ ಗಾತ್ರದ ಮರವೊಂದು ಹಠಾತ್ ಉರುಳಿ ಬಿದ್ದ ಪರಿಣಾಮ ಐದೂವರೆ ವರ್ಷದ ಚಿರನ್ವಿ ಎಂಬ ಬಾಲಕಿ ಮೃತಪಟ್ಟು ಇತರ ಕೆಲವು ವಿದ್ಯಾರ್ಥಿಗಳು ಗಾಯಗೊಂಡ ದಾರುಣ ಘಟನೆ ಬರಿಮಾರು ಸಮೀಪದ ಕಲ್ಲೆಟ್ಟಿ ಎಂಬಲ್ಲಿ ಬುಧವಾರ ಸಂಜೆ ವೇಳೆ ಸಂಭವಿಸಿದೆ.
ಮೃತ ಬಾಲಕಿ ಪೆರ್ನೆ ನಿವಾಸಿ ಚಂದ್ರಶೇಖರ್ ಅವರ ಪುತ್ರಿಯಾಗಿದ್ದು, ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಕೆಜಿ ವಿದ್ಯಾರ್ಥಿನಿಯಾಗಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಪೆರಾಜೆ ಸಾದಿಕುಕ್ಕು ನಿವಾಸಿ ಗಣೇಶ್ ಗೌಡ ಅವರ ಪುತ್ರಿ ಅನ್ವಿ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೋರ್ವ ಗಾಯಾಳು ಪೆರ್ನೆ ನಿವಾಸಿ ಕ್ಷಿತಿ ರೈ ಅವರನ್ನು ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಘಟನೆ ನಡೆದ ತಕ್ಷಣ ಜಮಾಯಿಸಿದ ಸ್ಥಳೀಯರು ಪುಟಾಣಿಗಳನ್ನು ಬಸ್ಸಿನಿಂದ ಹೊರತೆಗೆದು ವಿವಿಧ ಆಸ್ಪತ್ರೆಗಳಿಗೆ ಸಾಗಿಸಿ ರಕ್ಷಿಸುವ ಜವಾಬ್ದಾರಿ ನಿಭಾಯಿಸಿದ್ದಾರಾದರೂ ದುರದೃಷ್ಟವಶಾತ್ ಗಂಭೀರ ಗಾಯಗೊಂಡಿದ್ದ ಪುಟಾಣಿಯೋರ್ವಳು ಮೃತಪಟ್ಟಿದ್ದಾಳೆ.
ಗಾಯಳು ವಿದ್ಯಾರ್ಥಿಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಬಂಟ್ವಾಳ ತಹಶೀಲ್ದಾರ್ ಜಿ ಮಂಜುನಾಥ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬುಧವಾರ ಸಂಜೆ ಶಾಲಾ ಅವಧಿ ಮುಗಿದ ಬಳಿಕ ಶಾಲಾ ಬಸ್ಸಿನ ಮೂಲಕ ಸುಮಾರು 24ರಷ್ಟು ವಿದ್ಯಾರ್ಥಿಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು, ಕಲ್ಲಡ್ಕದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಮಾಣಿ, ಭರಣಿಕೆರೆ ಮತ್ತು ಕಲ್ಲೆಟ್ಟಿಯಲ್ಲಿ ಕೆಲ ಮಕ್ಕಳನ್ನು ಇಳಿಸಿ ಬಳಿಕ ಪೆರ್ನೆಗೆ ತೆರಳಲು ಬಸ್ಸು ಪ್ರಯಾಣ ಬೆಳೆಸಿತ್ತು. ಬಸ್ಸು ಬರಿಮಾರು ಗ್ರಾಮದ ಕಲ್ಲೇಟಿ ಬಳಿಯ ಶ್ರೀ ಕಾನಲ್ತಾಯ ದೈವಸ್ಥಾನದ ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ ವೇಳೆ, ಇಲ್ಲೇ ಇದ್ದ ಪುರಾತನ ಕಾಲದ ಬೃಹತ್ ಮರವೊಂದು ಬುಡಸಮೇತ ಕಿತ್ತು ಚಲಿಸುತ್ತಿದ್ದ ಬಸ್ಸಿನ ಮೇಲೆ ಬಿದ್ದು ಈ ಅವಘಡ ಸಂಭವಿಸಿದೆ. ಅವಘಡದಿಂದ ಶಾಲಾ ಬಸ್ಸು ಸಂಪೂರ್ಣ ಜಖಂಗೊಂಡಿದ್ದು, ಪುಟಾಣಿಗಳು ಭಯಭೀತರಾಗಿದ್ದರು.
ತಕ್ಷಣ ಧಾವಿಸಿ ಬಂದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ಬಂಟ್ವಾಳದಲ್ಲಿ ಮಳೆ ಬಿರುಸು ಪಡೆದುಕೊಂಡಿದ್ದು, ಮಳೆಯಿಂದಾಗಿ ಮರ ಬಿದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಜಿ ಮಂಜುನಾಥ್, ಬಂಟ್ವಾಳ ಗ್ರಾಮಾಂತರ ಪೊಲೀಸರ ಸಹಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿರುವ ತಾಲೂಕು ತಹಶೀಲ್ದಾರ್ ಜಿ ಮಂಜುನಾಥ್ ಅವರು ನಡೆಯಬಾರದ ಘಟನೆ ನಡೆದು ಹೋಗಿದೆ. ಪುಟಾಣಿ ಬಾಲಕಿ ಮೃತಪಟ್ಟಿರುವುದು ಅತೀವ ದುಃಖ ತಂದಿದೆ. ಮೃತಳ ಹಾಗೂ ಗಾಯಾಳು ವಿದ್ಯಾರ್ಥಿಗಳ ಕುಟುಂಬಗಳಿಗೆ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ವತಿಯಿಂದ ಸಾಂತ್ವನ ಹೇಳಲಾಗುವುದು ಎಂದಿದ್ದಾರೆ.
ಬೃಹತ್ ಮರ ಉಳಿದ ಪರಿಣಾಮ ಕಲ್ಲೆಟ್ಟಿ ದೇವಸ್ಥಾನಕ್ಕೂ ಹಾನಿಯಾಗಿದೆ. ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಹಾಗೂ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ದುರಂತದಿಂದ ಪೆರ್ನೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮೃತ ಬಾಲಕಿಯ ಕುಟುಂಬಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಸಂತಾಪ ಸೂಚಿಸಿವೆ. ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿರುವ ಬೃಹತ್ ಹಾಗೂ ರಸ್ತೆಗೆ ವಾಲಿಕೊಂಡಿರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ಮಾಧ್ಯಮಗಳು ಹಲವು ಬಾರಿ ವರದಿ ಪ್ರಕಟಿಸಿದ್ದರೂ ಸ್ಪಂದನೆ ಶೂನ್ಯವಾಗಿರುವ ಪರಿಣಾಮ ಇಂತಹ ಅವಘಡಗಳು ಸಂಭವಿಸುತ್ತಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

















0 comments:
Post a Comment