ಬಂಟ್ವಾಳ, ಜುಲೈ 20, 2026 (ಕರಾವಳಿ ಟೈಮ್ಸ್) : ಹೊಳೆಯಿಂದ ಅಕ್ರಮ ಮರಳು ಸಂಗ್ರಹ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಇಬ್ಬರನ್ನು ಬಂಧಿಸಿ ಮರಳು ಸಹಿತ ಇತರ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ನೆಕ್ಕರೆ ಎಂಬಲ್ಲಿ ಜುಲೈ 19 ರಂದು ನಡೆದಿದೆ.
ಆರೋಪಿಗಳನ್ನು ವಿಟ್ಲ ಕಸಬಾ ಗ್ರಾಮದ ನಿವಾಸಿ ಮೊಹಮ್ಮದ್ ಶರೀಫ್ (34) ಹಾಗೂ ಕುಳ ಗ್ರಾಮದ ನಿವಾಸಿ ಮೊಹಮ್ಮದ್ (49) ಎಂದು ಹೆಸರಿಸಲಾಗಿದೆ. ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರತ್ನಕುಮಾರ್ ಅವರು ಸಿಬ್ಬಂದಿಗಳ ಜೊತೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ತೆರಳಿದಾಗ ಆರೋಪಿಗಳು ಹೊಳೆಯಿಂದ ಅಕ್ರಮವಾಗಿ ಮರಳು ತೆಗೆದು ಗೋಣಿ ಚೀಲಕ್ಕೆ ತುಂಬಿಸುತ್ತಿರುವುದು ಕಂಡು ಬಂದಿದೆ.
ಸ್ಥಳದಲ್ಲಿ ಆರೋಪಿಗಳು ತುಂಬಿಸಿಟ್ಟಿದ್ದ ಸುಮಾರು 2 ಸಾವಿರ ರೂಪಾಯಿ ಮೌಲ್ಯದ 60 ಚೀಲ ಮರಳು ಸಹಿತ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment