ಬಂಟ್ವಾಳ, ಆಗಸ್ಟ್ 14, 2026 (ಕರಾವಳಿ ಟೈಮ್ಸ್) : ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲ ಚಿಂತನೆ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ಮೇಳವನ್ನು ಆಯೋಜಿಸಲಾಗಿತ್ತು.
ಶಾಲಾ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಸುಜಾತಾ ಹಾಗೂ ಶ್ರೀಮತಿ ಶ್ರೀಲತಾ ಅವರ ಮಾರ್ಗ ದರ್ಶನದಲ್ಲಿ ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳನ್ನು ಸ್ವತಃ ವಿದ್ಯಾರ್ಥಿಗಳೇ ತಯಾರಿಸಿ, ಪ್ರದರ್ಶಿಸಿ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಇದರ ಸ್ವಯಂ ಸೇವಕರಾದ ಶ್ರೀವತ್ಸ ಹಾಗೂ ಕುಮಾರಿ ಮೇಘ ಭಾಗವಹಿಸಿದ್ದು, ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಮಾದರಿಗಳನ್ನು ವೀಕ್ಷಿಸಿ, ಅವುಗಳ ಕುರಿತು ಮೌಲ್ಯಮಾಪನ ನಡೆಸಿದರು. ಉತ್ತಮ ಮಾದರಿಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳ ಜೊತೆಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಪ್ರಥಮ ಬಹುಮಾನ ಪಡೆದ 10ನೇ ತರಗತಿ ವಿದ್ಯಾರ್ಥಿ ತನ್ವಿತ್ ಹಾಗೂ ಮಹಮ್ಮದ್ ಸವಾದ್ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಸ್ಥೆಯ ಸ್ವಯಂಸೇವಕ ಶ್ರೀವತ್ಸ, ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಂತಹ ವಿಜ್ಞಾನ ಮೇಳಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶಿವಪ್ಪ ನಾಯ್ಕ್ ಎಸ್, ಹಿರಿಯ ಶಿಕ್ಷಕಿ ಶ್ರೀಮತಿ ವೀಣಾ ಭಾಗವಹಿಸಿದ್ದರು. ಕನ್ನಡ ಶಿಕ್ಷಕ ಧನರಾಜ್ ಡಿ ಆರ್ ವಂದಿಸಿದರು. 10ನೇ ತರಗತಿ ವಿದ್ಯಾರ್ಥಿ ಅಬ್ದುಲ್ ಶಮ್ಮಾಸ್ ಕಾರ್ಯಕ್ರಮ ನಿರೂಪಿಸಿದರು.





























0 comments:
Post a Comment