ಬಂಟ್ವಾಳ, ಆಗಸ್ಟ್ 01, 2026 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಶುಕ್ರವಾರದವರೆಗೂ ಶಾಂತವಾಗಿದ್ದ ತಾಲೂಕಿನ ಜೀವನದಿ ನೇತ್ರಾವತಿ ಶನಿವಾರ ಏಕಾಏಕಿ ಉಕ್ಕಿ ಉರಿಯಲಾರಂಭಿಸಿದೆ. ಶನಿವಾರ ಬೆಳಿಗ್ಗೆ 5.7 ಮೀಟರ್ ಇದ್ದ ನೇತ್ರಾವತಿ ನದಿ ನೀರಿನ ಮಟ್ಟ ಸಂಜೆಯ ವೇಳೆಗೆ ದಿಢೀರ್ 7.7 ಮೀಟರಿಗೇರಿದೆ. ತಗ್ಗು ಪ್ರದೇಶಳಿಗೆ ನದಿ ನೀರು ಆವರಿಸಲು ಆರಂಭಿಸಿದೆ. ರಸ್ತೆಗಳಿಗೂ ನದಿ ನೀರು ಪ್ರವೇಶಿಸುತ್ತಿದ್ದು, ಮಳೆ ಬಿರುಸು ಮುಂದುವರಿದರೆ ವಾಹನ ಸಂಚಾರ ಹಾಗೂ ಜನ ಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.
ತಾಲೂಕು ತಹಶೀಲ್ದಾರ್ ಜಿ ಮಂಜುನಾಥ್ ಹಾಗೂ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಕೇಂದ್ರ ಸ್ಥಾನದಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಮೇಲೆ ಕಣ್ಣಿಟ್ಟಿದ್ದು ಅವಲೋಕನ ನಡೆಸುತ್ತಿದ್ದಾರೆ. ಎಲ್ಲಾ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೂ ಅಲರ್ಟ್ ಆಗಿರುವಂತೆ ಅವರು ಸೂಚಿಸಿದ್ದಾರೆ. ನದಿ ತೀರ ಹಾಗೂ ತಗ್ಗು ಪ್ರದೇಶದ ಜನರಿಗೂ ಕೂಡಾ ಮುನ್ನಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿದ ಅವರು ಅಪಾಯದ ಸನ್ನಿವೇಶ ಇದ್ದರೆ ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.
ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ, ಬೋಗೋಡಿ, ನಂದಾವರ, ಗೂಡಿನಬಳಿ, ಕಂಚಿಕಾರ ಪೇಟೆ, ಅಕ್ಕರಂಗಡಿ, ಬಂಟ್ವಾಳ, ಬಸ್ತಿಪಡ್ಪು, ಜಕ್ರಿಬೆಟ್ಟು, ಬಡ್ಡಕಟ್ಟೆ, ನಾವೂರು, ಅಜಿಲಮೊಗರು ಮೊದಲಾದ ಪ್ರದೇಶಗಳಲ್ಲಿ ಮನೆ ಹಾಗೂ ಅಂಗಡಿಗಳು ನೆರೆ ಸಂತ್ರಸ್ತ ಪ್ರದೇಶಗಳಾಗಿ ಗುರುತಿಸಿಕೊಂಡಿದ್ದು, ಇಲ್ಲಿನ ಜನರಿಗೆ ಈಗಾಗಲೇ ಕಟ್ಟೆಚ್ಚರ ಘೋಷಿಸಲಾಗಿದೆ.
ಪಾಣೆಮಂಗಳೂರು ಶ್ರೀ ಶಾರದಾ ಹೈಸ್ಕೂಲ್ ಹಾಗೂ ಬಂಟ್ವಾಳ ಎಸ್ ವಿ ಎಸ್ ಶಾಲೆಗಳನ್ನು ಈಗಾಗಲೇ ಕಾಳಜಿ ಕೇಂದ್ರ ಎಂದು ತಾಲೂಕಾಡಳಿತ ಗುರುತಿಸಿದ್ದು, ಅಗತ್ಯ ಬಿದ್ದರೆ ಗಂಜಿ ಕೇಂದ್ರ ತೆರೆಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಕೂಡಾ ಪರಿಸ್ಥಿತಿ ಅವಲೋಕನ ನಡೆಸುತ್ತಿದ್ದು, ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಕರಾವಳಿ ಭಾಗದಲ್ಲಿಯೂ ಉತ್ತಮ ಮಳೆಯಾಗುತ್ತಿರುವ ಪರಿಣಾಮ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಬಗ್ಗೆ ಮನಗಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಾಲೂಕಾಡಳಿತ ಹಾಗೂ ಪುರಸಭಾಧಿಕಾರಿಗಳಿಗೆ ಸೂಚಿಸಿದ್ದಾರೆ.















0 comments:
Post a Comment