ಬಂಟ್ವಾಳ, ಆಗಸ್ಟ್ 01, 2026 (ಕರಾವಳಿ ಟೈಮ್ಸ್) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ ಇದರ ವತಿಯಿಂದ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಸುರಕ್ಷತೆ ಕುರಿತು ವಿದ್ಯಾರ್ಥಿಗಳಿಗಾಗಿ ಜಾಗೃತಿ ಕಾರ್ಯಕ್ರಮ ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರಿನ ಸಖಿ-1 ಸ್ಟಾಪ್ ಸೆಂಟರ್ ಇದರ ಆಡಳಿತಾಧಿಕಾರಿ ಶ್ರೀಮತಿ ಪ್ರಿಯಾ ರಾಜ್ ಮೋಹನ್ ವಿದ್ಯಾರ್ಥಿಗಳ ಜೊತೆ ಮಾತನಾಡಿ. ಹದಿಹರೆಯದ ಹುಡುಗಿಯರು ಮತ್ತು ಹುಡುಗರು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಸನ್ನಡತೆಯಿಂದ ದೂರವಾಗಿ ಹಾದಿ ತಪ್ಪುತ್ತಿರುವುದಕ್ಕೆ ಸ್ಪಷ್ಟ ಮಾರ್ಗದರ್ಶನ ಅಥವಾ ಅರಿವಿನ ಕೊರತೆ ಮುಖ್ಯ ಕಾರಣವಾಗಿದೆ. ಸುತ್ತಮುತ್ತಲಾಗುವ ವಿವಿಧ ರೀತಿಯ ದೌರ್ಜನ್ಯಗಳಿಂದ ಮುಕ್ತರಾಗಬೇಕಾದರೆ ತನಗೆ ಆಪ್ತರಾದ ನಂಬಿಕಸ್ಥರ, ತಂದೆ-ತಾಯಿಗಳ, ಶಿಕ್ಷಕರ ಅಥವಾ ಸಂಬಂಧಿಸಿದ ಇಲಾಖೆಗಳ ನೆರವನ್ನು ಪಡೆದುಕೊಳ್ಳುವುದು ಅತ್ಯವಶ್ಯ ಎಂದರು.
ಶಾಲೆಯ ಸುಮಾರು 300 ವಿದ್ಯಾರ್ಥಿಗಳನ್ನುದ್ದೇಶಿಸಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗುವ ವಿವಿಧ ರೀತಿಯ ಕಿರುಕುಳ ಹಾಗೂ ಅದರ ಬಗ್ಗೆ ತತ್ ಕ್ಷಣದ ವಿರೋಧವನ್ನು ಯಾವ ರೀತಿ ನೀಡಬೇಕೆನ್ನುವ ಅರಿವನ್ನು ಮೂಡಿಸಲಾಯಿತು.
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶಾರದ ಕೆ ಮಾತನಾಡಿ ಇಲಾಖೆಯಿಂದ ನಡೆಯುವ ಜಾಗೃತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಭವಿಷ್ಯದ ಹಿತದೃಷ್ಟಿಯಿಂದ ಸಕಾರಾತ್ಮಕವಾಗಿ ಸ್ವೀಕರಿಸಿ ಜೀವನವನ್ನು ಸುಂದರಗೊಳಿಸಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಮಿಷನ್ ಸಂಯೋಜಕಿ ಶ್ರೀಮತಿ ಅನುಷ್ಯಾ ಮಾತನಾಡಿ, ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ತನ್ನ ಭವಿಷ್ಯದ ಸುಂದರ ದಿನಗಳನ್ನು ಸಂಭ್ರಮದಿಂದ ಕಳೆಯಬೇಕು ಎಂದರು.
ಶಾಲಾ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕರಾದ ಜಗನ್ನಾಥ ಪುರುಷ ಸ್ವಾಗತಿಸಿ, ಶ್ರೀಮತಿ ಶಾಂತ ವಂದಿಸಿದರು, ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.












0 comments:
Post a Comment