ದಲಿತರಿಗೆ ಡೀಸಿ ಮನ್ನಾ ಜಮೀನು ಹೇಗೂ ಸಿಗುತ್ತಿಲ್ಲ, ಅಕ್ರಮ-ಸಕ್ರಮ ಮೂಲಕವಾದರೂ ಜಮೀನು ಕೊಡಿ : ದಲಿತ ಮುಖಂಡ ಮೋಹನ್ ಚೆಂಡ್ತಿಮಾರ್ ಡೀಸಿಗೆ ಆಗ್ರಹ - Karavali Times ದಲಿತರಿಗೆ ಡೀಸಿ ಮನ್ನಾ ಜಮೀನು ಹೇಗೂ ಸಿಗುತ್ತಿಲ್ಲ, ಅಕ್ರಮ-ಸಕ್ರಮ ಮೂಲಕವಾದರೂ ಜಮೀನು ಕೊಡಿ : ದಲಿತ ಮುಖಂಡ ಮೋಹನ್ ಚೆಂಡ್ತಿಮಾರ್ ಡೀಸಿಗೆ ಆಗ್ರಹ - Karavali Times

728x90

22 August 2026

ದಲಿತರಿಗೆ ಡೀಸಿ ಮನ್ನಾ ಜಮೀನು ಹೇಗೂ ಸಿಗುತ್ತಿಲ್ಲ, ಅಕ್ರಮ-ಸಕ್ರಮ ಮೂಲಕವಾದರೂ ಜಮೀನು ಕೊಡಿ : ದಲಿತ ಮುಖಂಡ ಮೋಹನ್ ಚೆಂಡ್ತಿಮಾರ್ ಡೀಸಿಗೆ ಆಗ್ರಹ

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಂಟ್ವಾಳದಲ್ಲಿ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ


ಬಂಟ್ವಾಳ, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ದಲಿತರಿಗೆ ಹಲವು ವರ್ಷಗಳಿಂದ ಯಾವುದೇ ಡೀಸಿ ಮನ್ನಾ ಜಮೀನು ಸಾಕಷ್ಟು ಹೋರಾ ಮಾಡಿದರೂ ದೊರೆಯುತ್ತಿಲ್ಲ. ಈಗಾಗಲೇ ದಲಿತ ಕುಟುಂಬಗಳಿಗೆ ದೊರೆತ ಜಮೀನಿನ ಸುತ್ತ ಇರುವ ಅಲ್ಪ ಸ್ವಲ್ಪ ಲಗ್ತಿ ಜಮೀನನ್ನಾದರೂ ಅಕ್ರಮ-ಸಕ್ರಮ ಯೋಜನೆಯ ಮೂಲಕ ದೊರಕಿಸಿಕೊಡಲು ಕ್ರಮ ಕೈಗೊಳ್ಳಿ ಎಂದು ದಲಿತ ಮುಖಂಡ ಮೋಹನ್ ಚೆಂಡ್ತಿಮಾರ್ ಅವರು ಜಿಲ್ಲಾಧಿಕಾರಿ ದರ್ಶನ್ ಅವರಿಗೆ ಆಗ್ರಹಿಸಿದರು. 

ಬಂಟ್ವಾಳದಲ್ಲಿ ಡೀಸಿ ಅವರ ನೇತೃತ್ವದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದು-ಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಈ ಆಗ್ರಹ ಮಾಡಿದರು. ಈ ಬಗ್ಗೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು ಸೂಕ್ತವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಹಶೀಲ್ದಾರ್ ಜಿ ಮಂಜುನಾಥ್ ಅವರಿಗೆ ಸೂಚಿಸಿದರು. 

ಪರಿಶಿಷ್ಠ ಜಾತಿ, ಪಂಗಡದವರಿಗೆ ವ್ಯವಸಾಯ ಮಾಡಲು ನೀಡುವಷ್ಟು ಜಮೀನು ನಮ್ಮ ಜಿಲ್ಲೆಯಲ್ಲಿ ಲಭ್ಯವಿಲ್ಲ ಎಂದು ಡೀಸಿ ಇದೇ ವೇಳೆ ಸ್ಪಷ್ಟಪಡಿಸಿದರು. 

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 1985 ರಿಂದ ಜಿಲ್ಲೆಯಲ್ಲಿ ಯಾವುದೇ ಭೂಮಿ ಸಿಕ್ಕಿಲ್ಲ. ಭೂಮಿ ಸಿಗದೆ ನಮ್ಮ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ದಲಿತ ಮುಖಂಡ ಜನಾರ್ದನ ಬೋಳಂತೂರು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಲಭ್ಯವಿರುವ ಸರಕಾರಿ ಜಮೀನಿನ ಪಟ್ಟಿ ಸಿದ್ದಪಡಿಸಿಕೊಂಡಿದ್ದೇವೆ. ಕಂದಾಯ ಇಲಾಖೆಯಲ್ಲಿರುವ ಒಟ್ಟು ಜಮೀನೆಷ್ಟು? ಖಾಲಿ ಇರುವ ಜಾಗವೆಷ್ಟು? ಡಿಸಿ ಮನ್ನಾ ಜಾಗ ಎಷ್ಟು? ಪರಿಶಿಷ್ಠ ಜಾತಿ, ಪಂಗಡಕ್ಕೆ ಮೀಸಲಿರುವ ಜಾಗ ಎಷ್ಟು, ನಿವೃತ್ತ ಸೈನಿಕರಿಗಾಗಿ ಮೀಸಲಿರುವ ಜಮೀನೆಷ್ಟು ಎನ್ನುವ ಬಗ್ಗೆ ಪಟ್ಟಿ ಮಾಡಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಎಚ್ ವಿ ದರ್ಶನ್ ಸ್ಪಷ್ಟನೆ ನೀಡಿದರು. 

ಬೋಳಂತೂರು ಗ್ರಾಮದ ಅರಣ್ಯದಂಚಿನಲ್ಲಿ ಕೊರಗ ಸಮುದಾಯದವರಿದ್ದು ಬುಟ್ಟಿ ನೇಯ್ಗೆಗೆ ಬಳ್ಳಿ ತರಲು ಅರಣ್ಯಕ್ಕೆ ಹೋಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಗುರುತಿನ ಚೀಟಿ ಅಗತ್ಯವಿದ್ದು ಗುರುತಿನ ಚೀಟಿ ನೀಡುವಂತೆ ಸ್ಥಳೀಯ ಮಹಿಳೆಯೊಬ್ಬರು ಸಭೆಯಲ್ಲಿ ಆಗ್ರಹಿಸಿದ್ದರು. ಈ ಬಗ್ಗೆ ಚರ್ಚೆ ನಡೆಸಿದ ಡಿಸಿ ಪ್ರಸ್ತಾವನೆ ಕಳುಹಿಸಿ ಕೊಡಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. 

ಬಿ ಸಿ ರೋಡಿನಲ್ಲಿ ಕಾರ್ಯಾಚರಿಸುತ್ತಿದ್ದ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಬೆಂಜನಪದವಿನ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಂಡು 7 ವರ್ಷ ಕಳೆದರೂ ಇನ್ನೂ ಹೊಸ ಕಟ್ಟಡ ನಿರ್ಮಾಣಗೊಂಡಿಲ್ಲ ಎಂದು ವಿಶ್ವನಾಥ ಚೆಂಡ್ತಿಮಾರ್ ಜಿಲ್ಲಾಧಿಕಾರಿಯವರ ಗಮನ ಸೆಳೆದರು. ವಸತಿ ಶಾಲೆ ಇದ್ದ ಜಾಗ ಪರಂಬೋಕು ಜಮೀನಾಗಿದ್ದು ಅದು ಸಮಾಜ ಕಲ್ಯಾಣ ಇಲಾಖೆಯ ಹೆಸರಿಗೆ ಆಗಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಇದು ಸರಕಾರದ ಮೂಲಕವೇ ಆಗಬೇಕಾದ ಕಾರ್ಯ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಬಂಟ್ವಾಳ ಕಂದಾಯ ಇಲಾಖೆಯಲ್ಲಿರುವ ಕಡತಗಳು ಕಾಣೆಯಾಗುತ್ತಿವೆ. ಕೆಲವೊಂದು ಕಡತಗಳನ್ನು ಪಡೆಯಲು ವಿಳಂಬಧೋರಣೆ ಅನುಸರಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಸೇಸಪ್ಪ ಬೆದ್ರಕಾಡು ಅವರು ಕಾಣೆಯಾಗಿರುವ ದಾಖಲೆಗಳ ವಿವರವಾದ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.  

ಸಭೆಯಲ್ಲಿ ಪೆÇ್ರಬೆಷನರಿ ಐಎಎಸ್ ಅಧಿಕಾರಿ ಅರ್ಚಿತ್ ಡೋಂಗ್ರೆ, ತಾಲೂಕು ತಹಶೀಲ್ದಾರ್ ಮಂಜುನಾಥ್, ತಾ ಪಂ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ದಲಿತರಿಗೆ ಡೀಸಿ ಮನ್ನಾ ಜಮೀನು ಹೇಗೂ ಸಿಗುತ್ತಿಲ್ಲ, ಅಕ್ರಮ-ಸಕ್ರಮ ಮೂಲಕವಾದರೂ ಜಮೀನು ಕೊಡಿ : ದಲಿತ ಮುಖಂಡ ಮೋಹನ್ ಚೆಂಡ್ತಿಮಾರ್ ಡೀಸಿಗೆ ಆಗ್ರಹ Rating: 5 Reviewed By: karavali Times
Scroll to Top