ಬಂಟ್ವಾಳ, ಅಕ್ಟೋಬರ್ 26, 2026 (ಕರಾವಳಿ ಟೈಮ್ಸ್) : ಅಮ್ಟಾಡಿಯಲ್ಲಿ ಬೃಹತ್ ಹೆಬ್ಬಾವೊಂದು ಸ್ಥಳೀಯ ಸಾಕು ಪ್ರಾಣಿಗಳ ಬೇಟೆ ಆರಂಭಿಸಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕಜಿಪಿತ್ಲುವಿನಲ್ಲಿ ಬೆಕ್ಕು, ನಾಯಿಗಳು ನಾಪತ್ತೆಯಾದ ಘಟನೆಗಳ ಹಿನ್ನಲೆಯಲ್ಲಿ ಸಂಶಯಗೊಂಡ ಸ್ಥಳೀಯರು ಹುಡುಕಾಟ ನಡೆಸಿದಾಗ ಪರಿಸರದಲ್ಲಿ ಬೆಕ್ಕನ್ನು ಹಿಡಿದು ಪೆÇದೆಯೊಳಗೆ ಸಾಗುತ್ತಿರುವ ಹೆಬ್ಬಾವು ಜನರ ಕಣ್ಣಿಗೆ ಬಿದ್ದಿದೆ.
ಅಮ್ಟಾಡಿ ಗ್ರಾಮದ ಕಜಿಪಿತ್ಲು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಬೆಕ್ಕುಗಳು ಹಾಗೂ ನಾಯಿಗಳು ನಾಪತ್ತೆಯಾಗುತ್ತಿದ್ದವು. ಬೆನ್ನು ಬೆನ್ನಿಗೆ ಸಾಕು ಪ್ರಾಣಿಗಳು ಕಾಣೆಯಾಗುತ್ತಿರುವುದರಿಂದ ಸಹಜವಾಗಿಯೇ ಸ್ಥಳೀಯರಿಗೆ ಕಾಡು ಪ್ರಾಣಿಗಳ ಬಗ್ಗೆ ಸಂಶಯ ಮೂಡಿತ್ತು. ಈ ಮಧ್ಯೆ ಅಕ್ಟೋಬರ್ 25 ರಂದು ಭಾನುವಾರ ತಡರಾತ್ರಿ ದೊಡ್ಡ ಗಾತ್ರದ ಹೆಬ್ಬಾವೊಂದು ಬೆಕ್ಕನ್ನು ಹಿಡಿದು ಪೆÇದೆಯೊಳಗೆ ಕೊಂಡೊಯ್ಯುತ್ತಿರುವುದು ಸ್ಥಳೀಯರ ಕಣ್ಣಿಗೆ ಬಿದ್ದಿದೆ. ಇದರಿಂದ ಸ್ಥಳೀಯರ ಸಂಶಯಕ್ಕೆ ಮತ್ತಷ್ಟು ಪುಷ್ಠಿ ದೊರೆತಂತಾಗಿದೆ.
ಈಗಾಗಲೇ ಹಲವು ಬೆಕ್ಕುಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಇದೇ ಹೆಚ್ಚಾವಿನ ಕಾಟ ಆಗಿರಬಹುದು, ಅಲ್ಲದೆ ಈ ಹೆಬ್ಬಾವು ಇದೇ ಪರಿಸರದಲ್ಲಿ ಕೆಲ ದಿನಗಳಿಂದ ಬೀಡುಬಿಟ್ಟಿರಬಹುದೇ ಎಂಬ ಸಂಶಯವೂ ಸ್ಥಳೀಯರಲ್ಲಿ ಬೇರೂರಿದೆ. ಜನವಸತಿ ಪ್ರದೇಶದ ಸಮೀಪವೇ ಬೃಹತ್ ಹೆಬ್ಬಾವು ಕಾಣಿಸಿಕೊಂಡಿರುವುದರಿಂದ, ಸಾಕುಪ್ರಾಣಿಗಳ ಸುರಕ್ಷತೆಯ ಬಗ್ಗೆ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.












0 comments:
Post a Comment