ಮಂಗಳೂರು, ಅಕ್ಟೋಬರ್ 29, 2026 (ಕರಾವಳಿ ಟೈಮ್ಸ್) : ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ಬ್ಯಾಂಕುಗಳು ನಿರಾಕರಿಸುವಂತಿಲ್ಲ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು ನಿಸಾರ್ ಅಹಮದ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅ 29 ರಂದು ನಡೆದ ಜಿಲ್ಲಾ ಮಟ್ಟದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಾಲ ಪಡೆಯಲು ಹಣಕಾಸು ನೆರವಿಗಾಗಿ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಹಲವು ಬ್ಯಾಂಕುಗಳು ವಿದ್ಯಾರ್ಥಿಗಳ ತಂದೆ ತಾಯಿಯ ಸಿಬಿಲ್ ಸ್ಕೋರ್ ಅಥವಾ ಸಾಲ ಎನ್ ಪಿ ಎ ಕಾರಣ ಮುಂದಿಟ್ಟು ಶಿಕ್ಷಣ ಸಾಲವನ್ನು ನಿರಾಕರಿಸುತ್ತಿರುವ ಬಗ್ಗೆ ಆಯೋಗಕ್ಕೆ ದೂರುಗಳು ಬಂದಿವೆ. 7.5 ಲಕ್ಷ ರೂಪಾಯಿವರೆಗಿನ ಶಿಕ್ಷಣ ಸಾಲವನ್ನು ಬ್ಯಾಂಕುಗಳು ಯಾವುದೇ ಗ್ಯಾರೆಂಟಿ ಇಲ್ಲದೆ ಒದಗಿಸಬೇಕು. ಈ ಬಗ್ಗೆ ಸರಕಾರ ಹಾಗೂ ಆರ್ ಬಿ ಐ ಸ್ಪಷ್ಟ ನಿರ್ದೇಶನ ಇದೆ ಎಂದವರು ತಿಳಿಸಿದರು. ವಿದ್ಯಾರ್ಥಿಗಳ ಶಿಕ್ಷಣ ಸಾಲಕ್ಕೆ ಬ್ಯಾಂಕುಗಳು ವಿಳಂಬಿಸಿದರೆ ಅಥವಾ ತಿರಸ್ಕರಿಸಿದರೆ ವಿದ್ಯಾರ್ಥಿಗಳು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು ಎಂದುರು.
ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯಲ್ಲಿರುವ 6 ವರ್ಷದೊಳಗಿನ ಮಕ್ಕಳ ಸಮಗ್ರ ಅಂಕಿ-ಸಂಖ್ಯೆಯನ್ನು ಸಂಗ್ರಹಿಸಿಟ್ಟಿಕೊಳ್ಳಬೇಕು. ಈ ಮಾಹಿತಿಯನ್ನು ಶಿಕ್ಷಣ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದರು.
ಸರಕಾರದ ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಮನೆ ಪೂರ್ಣಗೊಳಿಸಲು ಅನುದಾನ ಕೊರತೆಯಾದರೆ ಉದ್ಯೋಗ ಖಾತರಿ ಯೋಜನೆ, ಕಾರ್ಮಿಕ ಇಲಾಖೆಯ ವಸತಿ ಯೋಜನೆಯಡಿ ವಸತಿ ಒದಗಿಸಬೇಕು ಎಂದವರು ತಿಳಿಸಿದರು.
ಇದೇ ವೇಳೆ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಉತ್ತಮ ರೀತಿಯಲ್ಲಿದ್ದು, ಶಾಂತಿ ನೆಮ್ಮದಿ ನೆಲೆಸಿರುವುದಕ್ಕೆ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಯಾವುದೇ ಕೋಮು ಗಲಭೆಗಳಿಲ್ಲದೆ ಶಾಂತಿ ನೆಮ್ಮದಿ ಮೂಡಿದ್ದು ಇದಕ್ಕಾಗಿ ಪೆÇಲೀಸ್ ಇಲಾಖೆಯನ್ನು ಅಭಿನಂದಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಎಸ್ಪಿ ಡಾ. ಅರುಣ್ ಕೆ, ನಾಮನಿರ್ದೇಶಿತ ಸದಸ್ಯರಾದ ಝೀನತ್, ಸುಭಾಷ್ ಚೌಟ, ಪೀಟರ್ ಮೆಂಡೋನ್ಸ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.












0 comments:
Post a Comment