ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆ ಹಿನ್ನಲೆ : ಪ್ರಧಾನ ವ್ಯವಸ್ಥಾಪಕರಿಂದ ವ್ಯವಸ್ಥೆಗಳ ಪರಿಶೀಲನೆ - Karavali Times ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆ ಹಿನ್ನಲೆ : ಪ್ರಧಾನ ವ್ಯವಸ್ಥಾಪಕರಿಂದ ವ್ಯವಸ್ಥೆಗಳ ಪರಿಶೀಲನೆ - Karavali Times

728x90

10 October 2026

ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆ ಹಿನ್ನಲೆ : ಪ್ರಧಾನ ವ್ಯವಸ್ಥಾಪಕರಿಂದ ವ್ಯವಸ್ಥೆಗಳ ಪರಿಶೀಲನೆ

ಮಂಗಳೂರು, ಅಕ್ಟೋಬರ್ 10, 2026 (ಕರಾವಳಿ ಟೈಮ್ಸ್) : ಮಂಗಳೂರು ರೈಲ್ವೆ ಪ್ರದೇಶದವು ಅ 1 ರಂದು ನೈರುತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಂಡಿರುವ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ರೈಲ್ವೆ ಕಾರ್ಯಾಚರಣಾ ವ್ಯವಸ್ಥೆಗಳು ಮತ್ತು ಸಿದ್ಧತೆಯನ್ನು ಪರಿಶೀಲಿಸುವ ಉದ್ದೇಶದಿಂದ ಮಂಗಳೂರು ಪ್ರದೇಶದ ರೈಲು ನಿಲ್ದಾಣಗಳು, ಸರಕು ಸಾಗಣೆ ಯಾರ್ಡ್ ಗಳು ಹಾಗೂ ಇತರ ಪ್ರಮುಖ ರೈಲ್ವೆ ಸೌಲಭ್ಯಗಳನ್ನು ಪರಿಶೀಲಿಸಿದರು.

ಈ ಸಂದರ್ಭ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಹಾಗೂ ಮೈಸೂರು ವಿಭಾಗದ ವಿವಿಧ ಶಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ತಂಡವು ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಮತ್ತು ಜೋಕಟ್ಟೆ ಸೇರಿದಂತೆ ಪ್ರಮುಖ ರೈಲ್ವೆ ಸ್ಥಳಗಳಿಗೆ ಭೇಟಿ ನೀಡಿತು. ವಿವಿಧ ರೈಲ್ವೆ ಸೌಲಭ್ಯಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ಅಧಿಕಾರಿಗಳು, ಕಾರ್ಯಾಚರಣೆಗೆ ಸಂಬಂಧಿಸಿದ ಅಗತ್ಯತೆಗಳು ಹಾಗೂ ಗಮನಹರಿಸಬೇಕಾದ ಸಮಸ್ಯೆಗಳ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಚರ್ಚಿಸಿದರು.

ಪರಿಶೀಲನೆಯ ವೇಳೆ ರೈಲು ಕಾರ್ಯಾಚರಣೆ, ಸುರಕ್ಷತಾ ವ್ಯವಸ್ಥೆಗಳು, ನಿರ್ವಹಣಾ ಚಟುವಟಿಕೆಗಳು, ಮಾನವ ಸಂಪನ್ಮೂಲ ಮತ್ತು ಅಗತ್ಯ ಸೌಲಭ್ಯಗಳ ಲಭ್ಯತೆ, ಪ್ರಯಾಣಿಕರ ಸೌಲಭ್ಯಗಳು ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಪರಿಶೀಲಿಸಲಾಯಿತು. ಕ್ಷೇತ್ರ ಮಟ್ಟದ ಘಟಕಗಳ ಸಿದ್ಧತೆಯನ್ನು ಅವಲೋಕಿಸಿ, ಪರಿಣಾಮಕಾರಿ ಸಮನ್ವಯ ಮತ್ತು ಕಾರ್ಯಾಚರಣಾ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಮಹತ್ವವನ್ನು ಒತ್ತಿ ಹೇಳಲಾಯಿತು.

ರೈಲ್ವೆ ಸಿಬ್ಬಂದಿಯೊಂದಿಗಿನ ಸಂವಾದದ ವೇಳೆ ಮಾನವ ಸಂಪನ್ಮೂಲ, ಮೂಲ ಸೌಕರ್ಯ ಹಾಗೂ ಇತರ ಅಗತ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಬೇಡಿಕೆಗಳ ಕುರಿತು ಚರ್ಚಿಸಲಾಯಿತು. ಈ ಅಗತ್ಯತೆಗಳನ್ನು ಸಕಾಲದಲ್ಲಿ ಪರಿಹರಿಸಿ, ರೈಲ್ವೆ ಸೌಲಭ್ಯಗಳ ಕಾರ್ಯನಿರ್ವಹಣೆಯನ್ನು ಪರಿಣಾಮಕಾರಿಯಾಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು.

ಮಂಗಳೂರು ಪ್ರದೇಶದಲ್ಲಿ ಸುರಕ್ಷತೆ, ರೈಲುಗಳ ಸಮಯಪಾಲನೆ, ಕಾರ್ಯಾಚರಣಾ ದಕ್ಷತೆ ಮತ್ತು ಪ್ರಯಾಣಿಕರ ಸೇವೆಯಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಪ್ರಧಾನ ವ್ಯವಸ್ಥಾಪಕರು ಒತ್ತಿಹೇಳಿದರು. ರೈಲ್ವೆ ಚಟುವಟಿಕೆಗಳು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುವಂತೆ ವಿಭಾಗೀಯ ಕಚೇರಿಯೊಂದಿಗೆ ನಿಕಟ ಸಮನ್ವಯ ಕಾಪಾಡಿಕೊಳ್ಳಲು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಯಿತು.

ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಮತ್ತು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ, ಪಡೀಲ್ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ ಲೆವೆಲ್ ಕ್ರಾಸಿಂಗ್ ಗಳು, ಫರಂಗಿಪೇಟೆಯಲ್ಲಿ ಪ್ರಸ್ತಾವಿತ ಹೊಸ ರೈಲು ನಿಲ್ದಾಣ, ಪುತ್ತೂರಿನಲ್ಲಿ ಪ್ಲಾಟ್ ಫಾರ್ಮ್ ಕಾಮಗಾರಿಗಳನ್ನು ತ್ವರಿತಗೊಳಿಸುವುದು, ಪಾಂಡೇಶ್ವರ ರೈಲ್ವೆ ಕ್ರಾಸಿಂಗ್ ಹಾಗೂ ಮಂಗಳೂರು ವಿಮಾನ ನಿಲ್ದಾಣದ ಸಮೀಪ ರೈಲು ನಿಲ್ದಾಣವನ್ನು ಸ್ಥಾಪಿಸುವ ಸಾಧ್ಯತೆ ಸೇರಿದಂತೆ ಈ ಪ್ರದೇಶದ ಪ್ರಮುಖ ರೈಲ್ವೆ ಮೂಲ ಸೌಕರ್ಯ ಮತ್ತು ಸಂಪರ್ಕ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಿದರು. ಈ ಚರ್ಚೆಗಳ ಉದ್ದೇಶ ಈ ಪ್ರದೇಶದಲ್ಲಿ ರೈಲ್ವೆ ಸಂಪರ್ಕವನ್ನು ಬಲಪಡಿಸುವುದು ಮತ್ತು ಪ್ರಯಾಣಿಕರ ಅನುಕೂಲಗಳನ್ನು ಹೆಚ್ಚಿಸುವುದಾಗಿತ್ತು.

ಮೈಸೂರು ವಿಭಾಗದ ಆಡಳಿತವು ಇತ್ತೀಚೆಗೆ ವಿಭಾಗದ ವ್ಯಾಪ್ತಿಗೆ ಸೇರ್ಪಡೆಯಾದ ಮಂಗಳೂರು ಪ್ರದೇಶದ ಕಾರ್ಯನಿರ್ವಹಣೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ರೈಲು ಕಾರ್ಯಾಚರಣೆಗಳ ಸುಗಮ ನಿರ್ವಹಣೆ, ಪರಿಣಾಮಕಾರಿ ನಿರ್ವಹಣಾ ಚಟುವಟಿಕೆಗಳು, ಸುರಕ್ಷತೆ ಹಾಗೂ ಗುಣಮಟ್ಟದ ಪ್ರಯಾಣಿಕರ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕ್ಷೇತ್ರ ಮಟ್ಟದ ಘಟಕಗಳೊಂದಿಗೆ ಸಮನ್ವಯವನ್ನು ಬಲಪಡಿಸುವ ಮೂಲಕ ಮಂಗಳೂರು ಪ್ರದೇಶದಲ್ಲಿ ಸುರಕ್ಷಿತ, ದಕ್ಷ ಹಾಗೂ ಪ್ರಯಾಣಿಕ ಸ್ನೇಹಿ ರೈಲ್ವೆ ಸೇವೆಗಳನ್ನು ಒದಗಿಸುವ ನೈಋತ್ಯ ರೈಲ್ವೆ ಮತ್ತು ಮೈಸೂರು ವಿಭಾಗದ ಬದ್ಧತೆಯನ್ನು ಈ ಪರಿಶೀಲನೆ ಪುನರುಚ್ಚರಿಸಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆ ಹಿನ್ನಲೆ : ಪ್ರಧಾನ ವ್ಯವಸ್ಥಾಪಕರಿಂದ ವ್ಯವಸ್ಥೆಗಳ ಪರಿಶೀಲನೆ Rating: 5 Reviewed By: karavali Times
Scroll to Top