ಪಾಣೆಮಂಗಳೂರು ಹೆದ್ದಾರಿಯಿಂದ ನರಿಕೊಂಬು-ಶಂಭೂರು ಗ್ರಾಮಗಳ ಸಂಪರ್ಕ ರಸ್ತೆ ಏಕಾಏಕಿ ಬಂದ್ : ಅಧಿಕಾರಿಗಳ ವಿರುದ್ದ ರಮಾನಾಥ ರೈ ಗರಂ - Karavali Times ಪಾಣೆಮಂಗಳೂರು ಹೆದ್ದಾರಿಯಿಂದ ನರಿಕೊಂಬು-ಶಂಭೂರು ಗ್ರಾಮಗಳ ಸಂಪರ್ಕ ರಸ್ತೆ ಏಕಾಏಕಿ ಬಂದ್ : ಅಧಿಕಾರಿಗಳ ವಿರುದ್ದ ರಮಾನಾಥ ರೈ ಗರಂ - Karavali Times

728x90

11 November 2026

ಪಾಣೆಮಂಗಳೂರು ಹೆದ್ದಾರಿಯಿಂದ ನರಿಕೊಂಬು-ಶಂಭೂರು ಗ್ರಾಮಗಳ ಸಂಪರ್ಕ ರಸ್ತೆ ಏಕಾಏಕಿ ಬಂದ್ : ಅಧಿಕಾರಿಗಳ ವಿರುದ್ದ ರಮಾನಾಥ ರೈ ಗರಂ

ಬಂಟ್ವಾಳ, ನವಂಬರ್ 11, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಹೆದ್ದಾರಿಯಿಂದ ನರಿಕೊಂಬು-ಶಂಭೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆಯದೆ ಸ್ಥಳೀಯರಿಗೆ ಯಾವುದೇ ಪೂರ್ವ ಸೂಚನೆಯನ್ನೂ ನೀಡದೆ ಏಕಾಏಕಿ ಬಂದ್ ಮಾಡಿ ಕಾಮಗಾರಿ ಆರಂಭಿಸಿರುವ ಕ್ರಮದ ವಿರುದ್ದ ಗ್ರಾಮಸ್ಥರು ಗರಂ ಆಗಿದ್ದಾರೆ. 

ಗ್ರಾಮಸ್ಥರ ಸಮಸ್ಯೆಗೆ ಮಾಜಿ ಸಚಿವ ಬಿ ರಮಾನಾಥ ರೈ ಅವರು ಕೂಡಾ ಧ್ವನಿಯಾಗಿದ್ದು, ನವೆಂಬರ್ 11 ರಂದು ಬೆಳಿಗ್ಗೆ ಗ್ರಾಮಸ್ಥರೊಂದಿಗೆ ಸ್ಥಳಕ್ಕಾಗಮಿಸಿದ ರೈ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆಳೆದರು. ಪಾಣೆಮಂಗಳೂರು ಹೆದ್ದಾರಿಯಿಂದ ನರಿಕೊಂಬು-ಶಂಭೂರು ಗ್ರಾಮದ ಸಂಪರ್ಕ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಳೆದ ವಾರ ಏಕಾ ಏಕಿ ಅಗೆದು ಹಾಕಿ ಕಾಮಗಾರಿ ಆರಂಭಿಸಿರುವ ಹಿನ್ನಲೆಯಲ್ಲಿ ಈ ಭಾಗದ ಜನ ಸಂಪರ್ಕಕ್ಕಾಗಿ ತೀವ್ರ ಸಮಸ್ಯೆ ಎದುರಿಸುತ್ತಿರುವುದಾಗಿ ರಮಾನಾಥ ರೈ ಅವರಲ್ಲಿ ದೂರಿಕೊಂಡಿದ್ದಾರೆ. ರಸ್ತೆ ಮುಚ್ಚಿದ ಅಧಿಕಾರಿಗಳು ಪರ್ಯಾಯ ರಸ್ತೆಯ ಸಮಸ್ಯೆಗಳನ್ನಾದರೂ ಕನಿಷ್ಠಪಕ್ಷ ಸಮಪರ್ಕಗೊಳಿಸಿಲ್ಲ ಎಂಬುದು ಸ್ಥಳೀಯರ ಅರೋಪ. ಸದ್ಯ ನೆಹರುನಗರ-ಮಾಣಿಮಜಲು ಮಾರ್ಗವಾಗಿ ಪರ್ಯಾಯ ರಸ್ತೆಯನ್ನು ಗುರುತಿಸಲಾಗಿದ್ದು, ಈ ರಸ್ತೆ ತೀರಾ ಇಕ್ಕಟ್ಟಾಗಿದ್ದು, ಎದುರು ಬದುರು ವಾಹನ ಬರುವ ಸಂದರ್ಭ ಟ್ರಾಫಿಕ್ ಜಾಂ ಉಂಟಾಗುವುದಲ್ಲದೆ ರಸ್ತೆಯೂ ತೀರಾ ಹದಗೆಟ್ಟಿರುವ ಪರಿಣಾಮ ವಾಹನ ಸವಾರರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸ್ಥಳೀಯರು ಅಲವತ್ತುಕೊಂಡಿದ್ದಾರೆ. 

ಈ ಎಲ್ಲಾ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ತೀವ್ರ ಗರಂ ಆಗಿ ಪ್ರಶ್ನಿಸಿದ ರಮಾನಾಥ ರೈ ಅವರು, ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವ ಮುಂಚಿತವಾಗಿ ಅಲ್ಲಿನ ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾಮಗಾರಿಯ ಪೂರ್ಣ ವಿವರ ಅವರ ಮುಂದಿಟ್ಟು ಸಾಧಕ-ಬಾಧಕ ಚರ್ಚಿಸುವುದು ಸರಿಯಾದ ಕ್ರಮ. ಆದರೆ ಅದ್ಯಾವುದನ್ನೂ ಮಾಡದೆ ಏಕಾಏಕಿ ಕಾಮಗಾರಿ ಆರಂಭಿಸಿರುವುದು ಸರಿಯಾದ ಕ್ರಮವಲ್ಲ. ತುರ್ತಾಗಿ ಇಲ್ಲಿನ ಸಾರ್ವಜನಿಕರ ಬೇಡಿಕೆಗೆ ಸ್ಪಂದನೆ ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ರೈ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ಈ ಸಂದರ್ಭ ಸ್ಥಳಕ್ಕಾಗಮಿಸಿದ ಬಂಟ್ವಾಳ ತಹಶೀಲ್ದಾರ್ ಜಿ ಮಂಜುನಾಥ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಸಮಸ್ಯೆ ಬಗ್ಗೆ ಗಂಭೀರವಾಗಿ ಗಮಹರಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ರೈ ಸೂಚಿಸಿದರು. 

ಕೆಡಿಪಿ ಮಾಜಿ ಸದಸ್ಯ ಉಮೇಶ ಬೋಳಂತೂರು ನೇತೃತ್ವದಲ್ಲಿ ಗ್ರಾಮಸ್ಥರು ರಮಾನಾಥ ರೈ ಅವರೊಂದಿಗೆ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಸಂದರ್ಭ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಪ್ರಮುಖರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಆಲ್ಬರ್ಟ್ ಮಿನೇಜಸ್, ಕೃಷ್ಣಪ್ಪ ಪೂಜಾರಿ, ರವೀಂದ್ರ ಸಪಲ್ಯ, ಪ್ರಸಾದ್ ಗಾಣಿಗ, ನಿತ್ಯಾನಂದ ಕುರ್ಚಿಪಳ್ಳ, ಉಮೇಶ್ ನೆಲ್ಲಿಗುಡ್ಡೆ, ನರ್ಸಪ್ಪ ಅಮೀನ್, ಶೈಲೇಶ್ ಪೂಜಾರಿ, ಲೋಕೇಶ್, ಮೋನಪ್ಪ ನಿನ್ನಿಪಡ್ಪು, ಸತೀಶ್ ಶೇಡಿಗುರಿ ಮೊದಲಾದವರು ಇದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು ಹೆದ್ದಾರಿಯಿಂದ ನರಿಕೊಂಬು-ಶಂಭೂರು ಗ್ರಾಮಗಳ ಸಂಪರ್ಕ ರಸ್ತೆ ಏಕಾಏಕಿ ಬಂದ್ : ಅಧಿಕಾರಿಗಳ ವಿರುದ್ದ ರಮಾನಾಥ ರೈ ಗರಂ Rating: 5 Reviewed By: karavali Times
Scroll to Top